ADVERTISEMENT

ವಿಶ್ವ ಅಥ್ಲೆಟಿಕ್‌ನಲ್ಲಿ ನೀರಜ್ ಚಿನ್ನ ಸಾಧನೆ: ಪೋಷಕರ ಪ್ರತಿಕ್ರಿಯೆ ಹೀಗಿತ್ತು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2023, 6:04 IST
Last Updated 28 ಆಗಸ್ಟ್ 2023, 6:04 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ    –ಪಿಟಿಐ ಚಿತ್ರ

ನವದೆಹಲಿ: ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ನೀರಜ್ ಚೋಪ್ರಾ ಅವರ ತಂದೆ ಸತೀಶ್ ಕುಮಾರ್, ‘ಇದು ಇಡೀ ದೇಶಕ್ಕಾಗಿ ಮಾಡಿದ ದೊಡ್ಡ ಸಾಧನೆಯಾಗಿದೆ. ನೀರಜ್ ಈಗ ಇಡೀ ದೇಶದ ಮಗನಾಗಿದ್ದಾನೆ. ಆತ ದೇಶಕ್ಕಾಗಿ ಮತ್ತಷ್ಟು ಸಾಧನೆ ಮಾಡಲಿದ್ದಾನೆ‘ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

‘ನಮಗೆ ತುಂಬಾ ಸಂತೋಷವಾಗಿದೆ. ನೀರಜ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾನೆ’ ಎಂದು ನೀರಜ್ ಚೋಪ್ರಾ ಅವರ ತಾಯಿ ಸರೋಜ ದೇವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.

ಬುಡಾಪೆಸ್ಟ್‌ನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ನೀರಜ್‌, ಜಾವೆಲಿನ್‌ ಅನ್ನು 88.17 ಮೀ. ದೂರ ಎಸೆಯುವ ಮೂಲಕ ಅಗ್ರಸ್ಥಾನ ಪಡೆದುಕೊಂಡರು. ಆರು ಎಸೆತಗಳ ಅವಕಾಶವಿದ್ದ ಫೈನಲ್‌ನ ಎರಡನೇ ಪ್ರಯತ್ನದಲ್ಲಿ ಅವರಿಂದ ಈ ಸಾಧನೆ ಮೂಡಿ ಬಂದಿದೆ. ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊಟ್ಟ ಮೊದಲ ಚಿನ್ನದ ಪದಕ ಇದಾಗಿದೆ.

25 ವರ್ಷದ ಚೋಪ್ರಾ ಅವರು ವಿಶ್ವ ಚಾಂಪಿಯನ್‌ಷಿಪ್‌ ಹೊರತುಪಡಿಸಿ ಇತರ ಎಲ್ಲ ಪ್ರಮುಖ ಕೂಟಗಳಲ್ಲಿ ಚಿನ್ನ ಗೆದ್ದಿದ್ದರು. ಇದೀಗ ‘ವಿಶ್ವ’ ಚಾಂಪಿಯನ್‌ ಎನಿಸುವ ಮೂಲಕ ದೇಶದ ಹಿರಿಮೆ ಹೆಚ್ಚಿಸಿದ್ದಾರೆ.

2022ರಲ್ಲಿ ಅಮೆರಿಕದಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಅವರು, ಈ ಬಾರಿ ಚಿನ್ನ ಗೆಲ್ಲುವ ‘ಫೇವರಿಟ್‌’ ಸ್ಪರ್ಧಿ ಎನಿಸಿಕೊಂಡಿದ್ದರು.

ಚೋಪ್ರಾ ಅವರು ಒಲಿಂಪಿಕ್ಸ್‌ (2021, ಟೋಕಿಯೊ), ಏಷ್ಯನ್‌ ಗೇಮ್ಸ್‌ (2018) ಮತ್ತು ಕಾಮನ್‌ವೆಲ್ತ್‌ ಕೂಟದಲ್ಲಿ (2018) ಚಿನ್ನ ಜಯಿಸಿದ್ದಾರೆ. ಕಳೆದ ವರ್ಷ ಡೈಮಂಡ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ಶೂಟರ್‌ ಅಭಿನವ್‌ ಬಿಂದ್ರಾ ಬಳಿಕ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಕ್ರೀಡಾಪಟು ಎಂಬ ಗೌರವ ಚೋಪ್ರಾ ತಮ್ಮದಾಗಿಸಿಕೊಂಡಿದ್ದಾರೆ. ಬಿಂದ್ರಾ ಅವರು 2008ರ ಒಲಿಂಪಿಕ್ಸ್‌ನಲ್ಲಿ ಮತ್ತು 2006ರಲ್ಲಿ ಯಾಗ್ರೆಬ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು.

ನೀರಜ್‌ಗೆ ಪ್ರಬಲ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಶದ್‌ ನದೀಮ್‌ (87.82 ಮೀ.) ಬೆಳ್ಳಿ ಗೆದ್ದರೆ, ಜೆಕ್‌ ರಿಪಬ್ಲಿಕ್‌ನ ಯಾಕುಬ್‌ ವಾದ್ಲೇಚ್‌ (86.67 ಮೀ.) ಕಂಚು ತಮ್ಮದಾಗಿಸಿಕೊಂಡಿದ್ದಾರೆ.

ಕರ್ನಾಟಕದ ಡಿ.ಪಿ.ಮನು (83.72 ಮೀ.) ಆರನೇ ಸ್ಥಾನ ಪಡೆದರೆ, ಕಿಶೋರ್‌ ಜೇನಾ (84.77 ಮೀ.) ಐದನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ...

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಚಿನ್ನ ಸಾಧನೆ: ಪ್ರಧಾನಿ ಮೋದಿ, ಮುರ್ಮು ಸೇರಿ ಗಣ್ಯರ ಅಭಿನಂದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.