ADVERTISEMENT

ಮಹಿಳಾ ಹಾಕಿ | ಕೊನೆಕ್ಷಣದಲ್ಲಿ ಗೋಲು; ಜಪಾನ್ ಎದುರು ಡ್ರಾ ಸಾಧಿಸಿದ ಭಾರತ

ಪಿಟಿಐ
Published 6 ಸೆಪ್ಟೆಂಬರ್ 2025, 14:27 IST
Last Updated 6 ಸೆಪ್ಟೆಂಬರ್ 2025, 14:27 IST
   

ಹಾಂಗ್‌ಝೌ (ಚೀನಾ): ಮುಕ್ತಾಯದ ಸೀಟಿಗೆ ಕ್ಷಣಗಳ ಮೊದಲು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದ ನವನೀತ್ ಕೌರ್ ಅವರು ಭಾರತ ತಂಡ, ಏಷ್ಯಾ ಕಪ್ ಮಹಿಳಾ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜಪಾನ್ ಎದುರು 2–2 ಡ್ರಾ ಸಾಧಿಸಲು ನೆರವಾದರು.

ಶನಿವಾರ ನಡೆದ ‘ಬಿ’ ಗುಂಪಿನ ಈ ತೀವ್ರ ಹೋರಾಟದ ಪಂದ್ಯದಲ್ಲಿ ಹಿರೊಕಾ ಮುರಾಯಮಾ ಅವರು ಹತ್ತನೇ ನಿಮಿಷ ಜಪಾನ್ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ 30ನೇ ನಿಮಿಷ ರುತಜಾ ದಾದಸೊ ಪಿಸಾಳ್ ಅವರು ಗೋಲು ಹೊಡೆದಿದ್ದರಿಂದ ಸ್ಕೋರ್ ಸಮನಾಯಿತು.

ಅಂತಿಮ ಕ್ವಾರ್ಟರ್‌ನಲ್ಲಿ ಚಿಕೊ ಫುಜಿಬಯಾಶಿ ಅವರು ಜಪಾನ್‌ಗೆ ಮತ್ತೊಮ್ಮೆ ಮುನ್ನಡೆ ಒದಗಿಸಿದರು. ಆದರೆ ಪಂದ್ಯದ ಕೊನೆಯ ನಿಮಿಷ ನವನೀತ್ ಗೋಲು ಗಳಿಸಿ ಭಾರತ ಸೋಲಿನಿಂದ ಪಾರಾಗಲು ಕಾರಣರಾದರು.

ADVERTISEMENT

ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 11–0 ಗೋಲುಗಳಿಂದ ಬಗ್ಗುಬಡಿದ ಭಾರತ, ಗುಂಪಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಸೆ. 8ರಂದು ಸಿಂಗಪುರ ವಿರುದ್ಧ ಆಡಲಿದೆ.

ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 10ನೇ ಸ್ಥಾನದಲ್ಲಿ ಮತ್ತು ಜಪಾನ್‌ 12ನೇ ಸ್ಥಾನದಲ್ಲಿವೆ.

ಎಂಟು ತಂಡಗಳಿರುವ ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ತಲಾ ನಾಲ್ಕು ತಂಡಗಳಿದ್ದು, ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೂಪರ್ ಫೋರ್ ಹಂತದಲ್ಲಿ ಆಡಲಿವೆ. ಫೈನಲ್ ಸೆ. 14ರಂದು ನಿಗದಿಯಾಗಿದೆ.

ಈ ಟೂರ್ನಿಯ ವಿಜೇತರು 2026ರಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಹಾಕಿಗೆ ನೇರ ಟಿಕೆಟ್‌ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.