ADVERTISEMENT

ಪುರುಷರ ಹಾಕಿ: ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಸೌಹಾರ್ದ ಪಂದ್ಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 14:43 IST
Last Updated 25 ಜುಲೈ 2025, 14:43 IST
ಹಾಕಿ ಇಂಡಿಯಾ
ಹಾಕಿ ಇಂಡಿಯಾ   

ನವದೆಹಲಿ: ಮುಂಬರುವ ಏಷ್ಯಾಕಪ್‌ಗೆ ಸಿದ್ಧತೆಯ ಭಾಗವಾಗಿ ಭಾರತ ಪುರುಷರ ಹಾಕಿ ತಂಡವು  ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 15 ರಿಂದ 21ರವರೆಗೆ ಸೌಹಾರ್ದ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.

ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಭಾರತ ತಂಡವು ತನಗಿಂತ ಎರಡು ಸ್ಥಾನ ಮೇಲಿರುವ ಆಸ್ಟ್ರೇಲಿಯಾ ವಿರುದ್ಧ ಆಗಸ್ಟ್‌ 15, 16, 19 ಮತ್ತು 21ರಂದು ಸೆಣಸಲಿದೆ. ಎಲ್ಲಾ ನಾಲ್ಕು ಪಂದ್ಯಗಳು ಪರ್ತ್‌ನಲ್ಲಿ ನಡೆಯಲಿವೆ.

ಏಷ್ಯಾಕಪ್ ಟೂರ್ನಿಯು ಬಿಹಾರದ ರಾಜ್‌ಗಿರ್‌ನಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 7 ರವರೆಗೆ ನಡೆಯಲಿದೆ. ಈ ಟೂರ್ನಿಯ ವಿಜೇತ ತಂಡವು ಮುಂದಿನ ವರ್ಷದ ಎಫ್‌ಐಎಚ್‌ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ.

ADVERTISEMENT

ಈಚೆಗೆ ಯುರೋಪ್‌ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾ ಎರಡೂ ಪಂದ್ಯವನ್ನು ತಲಾ 3-2 ಅಂತರದಿಂದ ಗೆದ್ದಿತ್ತು.

ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು 3–2ರಿಂದ ಆಸ್ಟ್ರೇಲಿಯಾ ವಿರುದ್ಧ ಚಾರಿತ್ರಿಕ ಜಯ ಸಾಧಿಸಿತ್ತು. 1972ರ ಮ್ಯೂನಿಕ್‌ ಕ್ರೀಡಾಕೂಟದ ನಂತರ ಆಸ್ಟ್ರೇಲಿಯಾ ವಿರುದ್ಧ ಒಲಿಂಪಿಕ್ಸ್‌ನಲ್ಲಿ ಮೊದಲ ಗೆಲುವು ಅದಾಗಿತ್ತು.

2013ರಿಂದ ಉಭಯ ತಂಡಗಳು ಒಟ್ಟು 51 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಆಸ್ಟ್ರೇಲಿಯಾ  35 ಪಂದ್ಯಗಳನ್ನು ಜಯಿಸಿದೆ. ಭಾರತ ಒಂಬತ್ತು ಬಾರಿ ಗೆದ್ದರೆ, ಉಳಿದ ಏಳು ಪಂದ್ಯಗಳು ಡ್ರಾಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.