ADVERTISEMENT

ಭಾರತದ ಹಾಕಿಗೆ ಶತಮಾನದ ಸಂಭ್ರಮ

ಸಮಾರಂಭಕ್ಕೆ ಸಾಕ್ಷಿಯಾದ ದಿಗ್ಗಜರು, ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 18:26 IST
Last Updated 7 ನವೆಂಬರ್ 2025, 18:26 IST
<div class="paragraphs"><p>ಹಾಕಿ</p></div>

ಹಾಕಿ

   

ನವದೆಹಲಿ (ಪಿಟಿಐ): ಇಲ್ಲಿನ ಹೆಗ್ಗುರುತಾದ ಮೇಜರ್ ಧ್ಯಾನ್‌ ಚಂದ್ ಕ್ರೀಡಾಂಗಣ ಸಂಭ್ರಮದಿಂದ ಕಳೆಗಟ್ಟಿತ್ತು. ತಲೆಮಾರುಗಳನ್ನು ಪ್ರಭಾವಿಸಿದ ದಿಗ್ಗಜ ಆಟಗಾರರು, ಒಲಿಂಪಿಕ್‌ ಸ್ವರ್ಣ ವಿಜೇತ ಆಟಗಾರರು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದರು.

ಭಾರತದ ಹಾಕಿ ಕಂಡ ಶ್ರೇಷ್ಠ ಆಟಗಾರರನ್ನು ಅವರ ಕೊಡುಗೆಗಾಗಿ ಈ ಸಂದರ್ಭದಲ್ಲಿ ಹಾಕಿ ಇಂಡಿಯಾ ಗೌರವಿಸಿತು.

ADVERTISEMENT

ಭಾರತದ ಹಾಕಿ ಸುವರ್ಣಯುಗದಲ್ಲಿ ಆಡಿದ್ದ ಗುರುಬಕ್ಷ್‌ ಸಿಂಗ್, ಅಸ್ಲಂ ಶೇರ್‌ ಖಾನ್‌, ಹರ್ಬಿಂದರ್ ಸಿಂಗ್‌, ಅಜಿತ್ ಪಾಲ್‌ ಸಿಂಗ್‌, ಅಶೋಕ್ ಕುಮಾರ್, ಬಿ.ಪಿ.ಗೋವಿಂದ, ಜಾಫರ್ ಇಕ್ಬಾಲ್‌, ಬ್ರಿಗೇಡಿಯರ್ ಹರಚರಣ್‌ ಸಿಂಗ್‌, ವಿನೀತ್ ಕುಮಾರ್, ಮಿರ್‌ ರಂಜನ್‌ ನೇಗಿ, ರೋಮಿಯೊ ಜೇಮ್ಸ್‌, ಅಸುಂತ ಲಾಕ್ರಾ, ಸುಭದ್ರ ಪ್ರಧಾನ್ ಇವರಲ್ಲಿ ಒಳಗೊಂಡಿದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಭಾರತದ ರಾಷ್ಟ್ರೀಯ ಕ್ರೀಡೆಯ ವೈಭವಯುತ ಪಯಣವನ್ನು ಕೊಂಡಾಡಿದರು. ದೇಶದ ಕ್ರೀಡಾ ಪರಂಪರೆಯಲ್ಲಿ ಈ ಆಟದ ಗಟ್ಟಿ ಬೇರುಗಳನ್ನು ನೆನಪಿಸಿದರು.

ಮಾಂಡವೀಯ ಜೊತೆ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರೂ ಹಾಜರಿದ್ದರು.

‘ಈ ಕ್ರೀಡೆಯು ದೇಶದಲ್ಲಿ ವಿವಿಧ ಮಜಲುಗಳನ್ನು ಕಂಡಿದೆ. ಭಾರತ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಬಹುದು  ಎಂಬುದನ್ನು ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ತೋರಿದ ಸಾಧನೆಗಳ ಮೂಲಕ ವಿಶ್ವಕ್ಕೆ ತೋರ್ಪಡಿಸಿತು’ ಎಂದು ಮಾಂಡವೀಯ ಬಣ್ಣಿಸಿದರು.

ಪ್ರದರ್ಶನ ಪಂದ್ಯ:

ಸಚಿವ ಮಾಂಡವೀಯ ನೇತೃತ್ವದ ಕ್ರೀಡಾ ಸಚಿವರ ಇಲೆವೆನ್‌ ಮತ್ತು ಹಾಕಿ ಇಂಡಿಯಾ ಇಲೆವೆನ್‌ ನಡುವಣ ಪ್ರದರ್ಶನ ಪಂದ್ಯದ ಮೂಲಕ ಶತಮಾನೋತ್ಸವ ಸಮಾರಂಭ ಆರಂಭವಾಯಿತು. ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ಹಾಕಿ ಇಂಡಿಯಾ ಇಲೆವೆನ್ ನೇತೃತ್ವ ವಹಿಸಿದ್ದರು.

ಕ್ರೀಡಾ ಸಚಿವರ ಇಲೆವೆನ್‌ 3–1 ರಿಂದ ಈ ಪಂದ್ಯದಲ್ಲಿ ಜಯಗಳಿಸಿತು. 

ಶತಮಾನದ ಅವಧಿಯಲ್ಲಿ ಈ ಆಟ ಕಂಡು ಏಳುಬೀಳುಗಳನ್ನು ದಾಖಲಿಸಿರುವ ‘ಭಾರತದ ಹಾಕಿಯ ನೂರು ವರ್ಷ’ ಶೀರ್ಷಿಕೆಯ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಒಲಿಂಪಿಕ್ಸ್‌ ವೈಭವದ ನೆನಪುಗಳ ಸಾರುವ ಅಪರೂಪದ ಛಾಯಾಚಿತ್ರ, ಸ್ಮರಣಿಕೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ತಮ್ಮ ಹಾಕಿ ಪಯಣ ಆರಂಭವಾದ ಸ್ಥಳದಲ್ಲೇ ಈ ಸಮಾರಂಭ ನಡೆದಿರುವುದರಿಂದ ಭಾವುಕರಾಗಿರುವುದಾಗಿ ಟಿರ್ಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.