ADVERTISEMENT

ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌: ಸವಿತಾ ಶ್ರೀಗೆ ಕಂಚು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 18:55 IST
Last Updated 28 ಡಿಸೆಂಬರ್ 2022, 18:55 IST
   

ಅಲ್ಮಾತಿ, ಕಜಕಸ್ತಾನ: ಭಾರತದ ಮಹಿಳಾ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಬಿ.ಸವಿತಾ ಶ್ರೀ ಅವರು ಇಲ್ಲಿ ನಡೆದ ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

15 ವರ್ಷದ ಸವಿತಾ ಅವರು 11 ಸುತ್ತುಗಳಲ್ಲಿ ಒಟ್ಟು ಎಂಟು ಪಾಯಿಂಟ್ಸ್‌ ಸಂಗ್ರಹಿಸಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಎಂಟು ಸುತ್ತುಗಳ ಬಳಿಕ ಸವಿತಾ 6.5 ಪಾಯಿಂಟ್ಸ್‌ಗಳನ್ನು ಹೊಂದಿದ್ದರು. ಕೊನೆಯ ಮೂರು ಸುತ್ತುಗಳಲ್ಲಿ 1.5 ಪಾಯಿಂಟ್ಸ್‌ ಸಂಗ್ರಹಿಸಿದರು.

ಒಂಬತ್ತನೇ ಸುತ್ತಿನಲ್ಲಿ ಕಜಕಸ್ತಾನದ ಜನ್ಸಯ ಅಬ್ದುಮಲಿಕ್‌ ಎದುರು ಸೋತದ್ದು ಸವಿತಾ ಅವರಿಗೆ ಮುಳುವಾಗಿ ಪರಿಣಮಿಸಿತು. ಇಲ್ಲದಿದ್ದರೆ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಅವಕಾಶವಿತ್ತು.

ADVERTISEMENT

ಇಲ್ಲಿ 36ನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ್ತಿ 10ನೇ ಸುತ್ತಿನಲ್ಲಿ ಸಿಂಗಪುರದ ಕ್ವಿಯಾನ್‌ಯುನ್ ಗಾಂಗ್‌ ಅವರನ್ನು ಮಣಿಸಿದರೆ, ಕೊನೆಯ ಸುತ್ತಿನಲ್ಲಿ ಕಜಕಸ್ತಾನದ ದಿನಾರಾ ಸದುವಕಸೊವಾ ವಿರುದ್ಧ ಗೆದ್ದರು.

ಏಷ್ಯನ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಕೊನೇರು ಹಂಪಿ ಅವರು ಆರನೇ ಸ್ಥಾನ ಗಳಿಸಿದರು.

ಸವಿತಾ, ಹಂಪಿ ಮತ್ತು ಇತರ ಇಬ್ಬರು ಸ್ಪರ್ಧಿಗಳು ತಲಾ ಎಂಟು ಪಾಯಿಂಟ್ಸ್‌ ಗಳಿಸಿದ್ದರು. ‘ಟೈಬ್ರೇಕ್‌’ ಸ್ಕೋರ್‌ ಅಳವಡಿಸಿದಾಗ ಸವಿತಾ ಅವರು ಇತರರನ್ನು ಹಿಂದಿಕ್ಕಿ ಕಂಚು ತಮ್ಮದಾಗಿಸಿಕೊಂಡರು.

ಮಂಗಳವಾರ ಅಮೋಘ ಪ್ರದರ್ಶನ ನೀಡಿದ್ದ ಅವರು ತಾವಾಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದಿದ್ದರು. ಚೀನಾದ ತಾನ್ ಜೊಂಗ್‌ಯಿ ಚಿನ್ನ ಜಯಿಸಿದರು. ಅವರು ‘ಪ್ಲೇ ಆಫ್‌’ ನಲ್ಲಿ ಸದುವಕಸೊವಾ ವಿರುದ್ದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.