ADVERTISEMENT

ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್: ಹೈಜಂಪ್‌ನಲ್ಲಿ ಚಿನ್ನ ಗೆದ್ದ ಉಕ್ರೇನ್ ಕ್ರೀಡಾಪಟು

ಏಜೆನ್ಸೀಸ್
Published 19 ಮಾರ್ಚ್ 2022, 21:42 IST
Last Updated 19 ಮಾರ್ಚ್ 2022, 21:42 IST
ಯರೊಸ್ಲೋವ ಮಹುಚಿಕ್ –ಎಎಫ್‌ಪಿ
ಯರೊಸ್ಲೋವ ಮಹುಚಿಕ್ –ಎಎಫ್‌ಪಿ   

ಬೆಲ್‌ಗ್ರೇಡ್: ತವರಿನಲ್ಲಿ ಯುದ್ಧದ ಭೀತಿ ಮಡುಗಟ್ಟಿದ್ದರೆ ಆತಂಕ ಮೀರಿ ಸಾಧನೆಯ ಹಾದಿ ತುಳಿದ ಯರೊಸ್ಲೋವ ಮಹುಚಿಕ್ ಇಲ್ಲಿ ನಡೆಯುತ್ತಿರುವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟರು.

ರಷ್ಯಾ ಆಕ್ರಮಣ ಆರಂಭಗೊಂಡಾಗಿನಿಂದ ಮನೆಯ ನೆಲಮಹಡಿಯಲ್ಲಿ ದಿನ ಕಳೆದ ಮಹುಚಿಕ್ ನಂತರ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ 2,000 ಕಿಲೊಮೀಟರ್ ಪ್ರಯಾಣ ಮಾಡಿದ್ದರು.

ಯುರೋಪ್ ಒಳಾಂಗಣ ಹೈಜಂಪ್‌ನ ಹಾಲಿ ಚಾಂಪಿಯನ್ ಆಗಿರುವ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2019ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಒಳಾಂಗಣ ಕೂಟದಲ್ಲಿ ಬೆಳ್ಳಿ ಪದಕ ಗಳಿಸಿದ್ದರು.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ರಷ್ಯಾದ ಮರಿಯಾ ಲಸಿಸ್ಕೀನ್ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ರಷ್ಯಾ ಮೇಲೆ ‘ವಿಶ್ವ ಅಥ್ಲೆಟಿಕ್ಸ್’ ನಷೇಧ ಹೇರಿದೆ.

’ಸ್ಪರ್ಧಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಸಂದೇಹವಿತ್ತು. ಆದರೆ ಕೋಚ್ ನನ್ನನ್ನು ಹುರಿದುಂಬಿಸಿದರು. ರಷ್ಯಾ ಆಕ್ರಮಣಕ್ಕೂ ಮೊದಲು ಮಾಡಿದ್ದ ಸಾಧನೆಯ ಹಿನ್ನೆಲೆಯಲ್ಲಿ ಕಣಕ್ಕೆ ಇಳಿಯಬೇಕೆಂದೂ ಪದಕ ಗೆಲ್ಲಲು ಪ್ರಯತ್ನಿಸಬೇಕು ಎಂದೂ ಅವರು ಸೂಚಿಸಿದ್ದರು.

ಮೊದಲ ಪ್ರಯತ್ನದಲ್ಲಿ 1.92 ಮೀಟರ್ಸ್ ಜಿಗಿದ ಅವರು ಎರಡನೇ ಪ್ರಯತ್ನದಲ್ಲಿ 2 ಮೀಟರ್ ಜಿಗಿದರು. ಅಂತಿಮ ಪ್ರಯತ್ನದಲ್ಲಿ 2.02 ಮೀಟರ್ ಸಾದನೆಯೊಂದಿಗೆ ಪಕದ ಗಳಿಸಿದರು. ಆಸ್ಟ್ರೇಲಿಯಾದ ಎಲೀನರ್ಪ್ಯಾಟರ್ಸನ್ 2.04 ಮೀಟರ್ ಜಿಗಿದರು. ಆದರೆ ತಪ್ಪೆಸಗಿದ್ದರಿಂದಯರೊಸ್ಲೋವ ಮಹುಚಿಕ್ ಅವರ ಹಾದಿ ಸುಗಮವಾಯಿತು. ಪ್ಯಾಟರ್ಸನ್ 2 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಗಳಿಸಿದರೆ ಕಜಕಸ್ತಾನದ ನಡೇಜ್ಡ ಸುಬೊವಿಜ್ಕಯ 1.98 ಮೀಟರ್‌ನೊಂದಿಗೆ ಕಂಚಿನ ಪದಕ ಗಳಿಸಿದರು.

ಯರೊಸ್ಲೋವ ಮಹುಚಿಕ್ ಅವರೊಂದಿಗೆ ಉಕ್ರೇನ್‌ ರಾಜಧಾನಿ ಕೀವ್‌ನಿಂದ ಪತಿ ಮತ್ತು ನಾಯಿ ಜೊತೆ ಬಂದಿರುವ ಐರಿನಾ ಜೆರಾಶೆಂಕೊ ಐದನೇ ಸ್ಥಾನ ಗಳಿಸಿದರು. ಬಾಂಬ್ ಮತ್ತು ರಾಕೆಟ್ ದಾಳಿಯ ಮಧ್ಯದಿಂದ ಎದ್ದು ಬಂದಿರುವ ಅವರ ಬಳಿ ಈಗ ಅಭ್ಯಾಸದ ಕಿಟ್ ಇಲ್ಲ!

ಯರೊಸ್ಲೋವ ಮಹುಚಿಕ್ ಜೊತೆಯಲ್ಲಿ ಕೋಚ್, ತಾಯಿ, ಸಹೋದರಿ ಮತ್ತು ಎರಡು ವರ್ಷ ವಯಸ್ಸಿನ ಸಹೋದರ ಸಂಬಂಧಿ ಇದ್ದಾರೆ. ಅವರ ತಂದೆ ಯುದ್ಧಪೀಡಿತ ಉಕ್ರೇನ್‌ನಲ್ಲೇ ಇದ್ದಾರೆ.

*

ಈ ಪದಕವು ಉಕ್ರೇನ್‌ಗೆ ಅರ್ಪಣೆ ಮಾಡುತ್ತಿದ್ದೇನೆ. ನನ್ನ ದೇಶಕ್ಕೆ, ನನ್ನ ಜನರಿಗೆ ಮತ್ತು ರಾಷ್ಟ್ರದ ಸೇನೆಗೆ ನನ್ನ ನಮನಗಳು.
-ಯರೊಸ್ಲೋವ ಮಹುಚಿಕ್ ಉಕ್ರೇನ್ ಅಥ್ಲೀಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.