ADVERTISEMENT

Chess: ಇಶಾಗೆ ರಾಜ್ಯದ 'ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್' ಗೌರವ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 18:37 IST
Last Updated 14 ನವೆಂಬರ್ 2025, 18:37 IST
ಗ್ರ್ಯಾಂಡ್‌ ಮಾಸ್ಟರ್‌ ಇಶಾ ಶರ್ಮಾ
ಗ್ರ್ಯಾಂಡ್‌ ಮಾಸ್ಟರ್‌ ಇಶಾ ಶರ್ಮಾ   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಇಶಾ ಶರ್ಮಾ ಅವರು ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ಸರ್ಬಿಯಾದ ಸುಬೊಟಿಕಾದಲ್ಲಿ ನಡೆದ ಐಎಂ ಸರ್ಕಿಟ್‌ ಟೂರ್ನಿಯಲ್ಲಿ ಅವರು ಶುಕ್ರವಾರ ಮೂರನೇ ಡಬ್ಲ್ಯುಜಿಎಂ ನಾರ್ಮ್ ಪಡೆದು ಅಗತ್ಯವಿದ್ದ ಅರ್ಹತೆ ಪೂರೈಸಿದರು.

ಡಬ್ಲ್ಯುಜಿಎಂ ‘ಟೈಟಲ್‌’ ಪಡೆಯಲು ಆಟಗಾರ್ತಿಯೊಬ್ಬರು ಮೂರು ನಾರ್ಮ್‌ಗಳ ಜೊತೆ 2300 ಫಿಡೆ  ರೇಟಿಂಗ್ ಗಳಿಸಬೇಕಾಗುತ್ತದೆ. ಅವರು 2022ರ ಆಗಸ್ಟ್‌ನಲ್ಲೇ ಈ ರೇಟಿಂಗ್ ಪೂರೈಸಿದ್ದರು.

2022ರಲ್ಲಿ ಸ್ಲೊವಾಕಿಯಾದಲ್ಲಿ ಅವರು ಮೊದಲ ನಾರ್ಮ್ ಪಡೆದಿದ್ದರು. ಮರುವರ್ಷ ಮೊರಾಕೊದಲ್ಲಿ ಎರಡನೇ ಡಬ್ಲ್ಯುಜಿಎಂ ನಾರ್ಮ್ ಗಳಿಸಿದ್ದರು. 

ADVERTISEMENT

2019ರಲ್ಲಿ ಅವರು ಮಹಿಳಾ ಐಎಂ (ಡಬ್ಲ್ಯುಐಎಂ) ಆಗಿದ್ದರು. ಈ ಸಾಧನೆಗೆ ಪಾತ್ರರಾಗಿದ್ದ ರಾಜ್ಯದ ಮೊದಲಿಗರಾಗಿದ್ದರು.

‘ಇದಕ್ಕಾಗಿ ಐದು ವರ್ಷಗಳಿಂದ ಶ್ರಮ ಹಾಕಿದ್ದೆ. ಈಗ ಸಾಕಾರಗೊಂಡಿರುವುದು ಸಂತಸಕ್ಕಿಂತ ನಿರಾಳತೆ ನೀಡಿದೆ’ ಎಂದು ಇಶಾ ಸರ್ಬಿಯಾದಿಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಅವರು ಈ ವರ್ಷ ಚೆಸ್‌ ಆಟಗಾರ ಐಎಂ ಶರಣ್‌ ರಾವ್‌ ಅವರನ್ನು ವಿವಾಹವಾಗಿದ್ದಾರೆ. ಮಂಗಳೂರಿನಲ್ಲಿರುವ ಶರಣ್ ಅವರ ರಾವ್ ಚೆಸ್‌ ಅಕಾಡೆಮಿಯಲ್ಲಿ ಇಶಾ ಮುಖ್ಯ ಕೋಚ್‌ ಆಗಿದ್ದಾರೆ. ‘ಆಟಕ್ಕಿಂತ ಈಗ ತರಬೇತಿ ನೀಡುವತ್ತ ಗಮನ ನೀಡುತ್ತಿದ್ದೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.