ADVERTISEMENT

ಕರ್ನಾಟಕ ಮಿನಿ ಗೇಮ್ಸ್‌: ವಾಲಿಬಾಲ್‌ನಲ್ಲಿ ದಕ್ಷಿಣ ಕನ್ನಡ, ಗದಗ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 15:47 IST
Last Updated 7 ನವೆಂಬರ್ 2025, 15:47 IST
ಬಾಲಕಿಯರ ಕಬಡ್ಡಿಯಲ್ಲಿ ಪ್ರಶಸ್ತಿ ಗೆದ್ದ ಚಿಕ್ಕಮಗಳೂರು ತಂಡ
ಬಾಲಕಿಯರ ಕಬಡ್ಡಿಯಲ್ಲಿ ಪ್ರಶಸ್ತಿ ಗೆದ್ದ ಚಿಕ್ಕಮಗಳೂರು ತಂಡ   

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಗದಗ ತಂಡಗಳು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಗೇಮ್ಸ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಸ್ಪರ್ಧೆಯ ಪ್ರಶಸ್ತಿಯನ್ನು ಗೆದ್ದುಕೊಂಡವು. 

ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಸಹಭಾಗಿತ್ವದ ಕ್ರೀಡಾಕೂಟದ ಆರನೇ ದಿನವಾದ ಶುಕ್ರವಾರ ನಡೆದ ವಾಲಿಬಾಲ್‌ ಫೈನಲ್‌ನಲ್ಲಿ ದಕ್ಷಿಣ ಕನ್ನಡದ ಬಾಲಕರು 3–0 (25–23, 25–22, 25–17) ಯಿಂದ ಬೆಂಗಳೂರು ತಂಡವನ್ನು ಮಣಿಸಿದರು. ಗದಗ ಬಾಲಕಿಯರು  ಪ್ರಶಸ್ತಿ ಸುತ್ತಿನಲ್ಲಿ 3–0 (25-11, 25-12, 25-11) ಯಿಂದ ಬೆಂಗಳೂರು ತಂಡವನ್ನು ಸೋಲಿಸಿದರು. 

ಉತ್ತರ ಕನ್ನಡ ಜಿಲ್ಲಾ ಬಾಲಕರ ತಂಡವು ಕಬಡ್ಡಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್‌ನಲ್ಲಿ 55–26ರಿಂದ ಬೆಂಗಳೂರು ನಗರ ತಂಡವನ್ನು ಮಣಿಸಿತು. ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ತಂಡವು ಚಾಂಪಿಯನ್‌ ಆಯಿತು. ಪ್ರಶಸ್ತಿ ಸುತ್ತಿನಲ್ಲಿ 33–25ರಿಂದ ದಕ್ಷಿಣ ಕನ್ನಡ ತಂಡವನ್ನು ಪರಾಭವಗೊಳಿಸಿತು. 

ADVERTISEMENT

ಬಾಲಕರ ಫುಟ್‌ಬಾಲ್‌ ಫೈನಲ್‌ನಲ್ಲಿ ಬೆಳಗಾವಿ ತಂಡವು 3–2ರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ದಕ್ಷಿಣ ಕನ್ನಡ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ನಿಗದಿತ ಅವಧಿಯ ಪಂದ್ಯವು 1–1ರಿಂದ ಡ್ರಾಗೊಂಡಿತ್ತು. 

ಉನ್ನತಿ, ತನಯ್‌ಗೆ ಪ್ರಶಸ್ತಿ: ಮಂಡ್ಯದ ಉನ್ನತಿ ವಿ ಮುರಳೀಧರ್ ಮತ್ತು ಬೆಂಗಳೂರಿನ ತನಯ್ ಬಾಬು ಪೈ ಅವರು ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ಟೆನಿಸ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಫೈನಲ್‌ನಲ್ಲಿ ಉನ್ನತಿ 6-0, 6-1ರಿಂದ  ಬೆಂಗಳೂರಿನ ಕಾಶ್ವಿ ವಿ. ಕೋಣಂಕಿ ವಿರುದ್ಧ; ತನಯ್ 6–2, 6–2ರಿಂದ ಬೆಂಗಳೂರಿನ ಮಾಧವ್ ದಾಧಿಚ್ ವಿರುದ್ಧ ಜಯ ಸಾಧಿಸಿದರು. 

ಮೈಸೂರು ಜಿಲ್ಲೆಯ ರುತ್ವಿ ಎಂ. ಮಹೇಶ್ ಮತ್ತು ಸಾನ್ವಿ ಪ್ರಕಾಶ್‌ರಾಜ್ ಪುರೋಹಿತ್ ಅವರು ಬಾಲಕಿಯರ ಡಬಲ್ಸ್‌ ಪ್ರಶಸ್ತಿಯನ್ನು ಹಾಗೂ ಬೆಂಗಳೂರಿನ ಮಾಧವ್ ದಾಧಿಚ್ ಮತ್ತು ತನಯ್ ಬಾಬು ಪೈ ಬಾಲಕರ ಡಬಲ್ಸ್‌ ಪ್ರಶಸ್ತಿ ಗೆದ್ದರು.