
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಚಳಿಗಾಲದ ತಾಣವಾದ ಗುಲ್ಮಾರ್ಗ್‌ನಲ್ಲಿ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಆರನೇ ಆವೃತ್ತಿಗೆ ಸೋಮವಾರ ಚಾಲನೆ ಸಿಗಲಿದೆ. ಕೂಟದಲ್ಲಿ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿ ನಾಲ್ಕು ದಿನ ನಡೆಯಲಿರುವ ಈ ಕೂಟಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚಾಲನೆ ನೀಡುವರು.
‘30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 400ಕ್ಕೂ ಅಧಿಕ ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ಗುಲ್ಮಾರ್ಗ್‌ನಲ್ಲಿ ಉತ್ತಮ ಹಿಮದ ಹೊದಿಕೆ ಇದೆ ಮತ್ತು ಹವಾಮಾನವು ಕೂಟಕ್ಕೆ ಪೂರಕವಾಗಿ ಇರಲಿದೆ’ ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಮಂಡಳಿಯ ಕಾರ್ಯದರ್ಶಿ ನುಜತ್ ಗುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಜನವರಿ 20ರಿಂದ 26 ರವರೆಗೆ ಲಡಾಖ್‌ನ ಲೇಹ್‌ನಲ್ಲಿ ಮಂಜುಗಡ್ಡೆಯ ಮೇಲೆ ಚಳಿಗಾಲದ ಕ್ರೀಡಾಕೂಟದ ಮೊದಲ ಲೆಗ್ ನಡೆದಿತ್ತು. ಹಿಮದಲ್ಲಿ ನಡೆಯುವ ಎರಡನೇ ಲೆಗ್‌ಗೆ ಗುಲ್ಮಾರ್ಗ್ ಸಜ್ಜಾಗಿದೆ. ಈ ಹಿಂದಿನ ಎಲ್ಲಾ ಆರು ಆವೃತ್ತಿಗಳು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ನಡೆದಿವೆ.
ಗುಲ್ಮಾರ್ಗ್‌ನಲ್ಲಿ ಸ್ಕೀ ಪರ್ವತಾರೋಹಣ, ಆಲ್‌ಪೈನ್ ಸ್ಕೀಯಿಂಗ್, ನಾರ್ಡಿಕ್ ಸ್ಕೀಯಿಂಗ್ (ಕ್ರಾಸ್ ಕಂಟ್ರಿ) ಮತ್ತು ಸ್ನೋ ಬೋರ್ಡಿಂಗ್ ಎಂಬ ನಾಲ್ಕು ಪದಕ ವಿಭಾಗಗಳ ಸ್ಪರ್ಧೆ ನಡೆಯಲಿದೆ. ಆಲ್‌ಪೈನ್ ಸ್ಕೀಯಿಂಗ್ ಸ್ಪರ್ಧೆಗೆ ಅತಿ ಹೆಚ್ಚು ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಡಾಖ್ ಲೆಗ್‌ನಲ್ಲಿ ಹರಿಯಾಣ ತಂಡವು ನಾಲ್ಕು ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಡಾಖ್, ಮಹಾರಾಷ್ಟ್ರ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.