ಲಯೊನೆಲ್ ಮೆಸ್ಸಿ
ಕೃಪೆ: ರಾಯಿಟರ್ಸ್
ತಿರುವನಂತಪುರ: ಫುಟ್‌ಬಾಲ್ ತಾರೆ, ಅರ್ಜೆಂಟಿನಾದ ಆಟಗಾರ ಲಿಯೋನೆಲ್ ಮೆಸ್ಸಿ ಅವರು ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಸೌಹಾರ್ದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಶನಿವಾರ ಹೇಳಿದ್ದಾರೆ.
ಮೆಸ್ಸಿ ಭಾರತ ಭೇಟಿಯ ಕುರಿತು ಕಳೆದ ಹಲವು ತಿಂಗಳುಗಳಿಂದ ಸುದ್ದಿಯಾಗುತ್ತಿದೆ. ಇದೀಗ ಕೇರಳ ಸರ್ಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದ್ದು, ‘ವ್ಯವಸ್ಥಾಪಕ ಲಿಯೋನೆಲ್ ಸ್ಕಲೋನಿ ನೇತೃತ್ವದ ಅರ್ಜೆಂಟಿನಾ ರಾಷ್ಟ್ರೀಯ ತಂಡವು ಕೇರಳದ ಅಂಗೋಲಾ ಮತ್ತು ಲೋಂಡಾದಲ್ಲಿ ಸೌಹಾರ್ದ ಪಂದ್ಯಗಳ ಆಡುವುದನ್ನು ಆ ತಂಡ ಖಚಿತಪಡಿಸಿದೆ’ ಎಂದು ತಿಳಿಸಿದ್ದಾರೆ.
'2025ರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪಂದ್ಯ ಆಯೋಜಿಸುವ ಕುರಿತು ಕೇರಳ ಸರ್ಕಾರವು ಅರ್ಜಿಂಟಾ ಫುಟ್‌ಬಾಲ್ ಸಂಸ್ಥೆಯನ್ನು ಕೋರಿತ್ತು. ಆದರೆ 2026ರಲ್ಲಿ ಭೇಟಿ ನೀಡುವುದಾಗಿ ತಂಡವು ಈ ಹಿಂದೆ ಹೇಳಿತ್ತು. ಇದೇ ವರ್ಷ ಭೇಟಿ ನೀಡುವ ನಮ್ಮ ಕೋರಿಕೆಯನ್ನು ಅವರು ಒಪ್ಪಿಕೊಂಡು ಅದನ್ನು ಖಚಿತಪಡಿಸಿದ್ದಾರೆ. 2022ರ ವಿಶ್ವಕಪ್ ವಿಜೇತ ತಂಡವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.
‘ಮೆಸ್ಸಿ ಮತ್ತು ಅರ್ಜೆಂಟಿನಾ ತಂಡವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಫುಟ್‌ಬಾಲ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕೇರಳದಲ್ಲಿ ಮೆಸ್ಸಿ ಆಡುವುದನ್ನು ನೋಡಲು ಜನರಿಗೆ ಅವಕಾಶ ಮಾಡಿಕೊಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಈ ಕಾರ್ಯಕ್ರಮ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಲು ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಸೂಚಿಸಿದೆ’ ಎಂದೂ ಅಬ್ದುರಹಿಮಾನ್ ಹೇಳಿದ್ದಾರೆ.
‘ಕೇರಳದಲ್ಲಿ ಆಯೋಜನೆಗೊಳ್ಳಲಿರುವ ಪಂದ್ಯಾವಳಿಗಾಗಿ ಫಿಫಾದ ಅಗ್ರ 50ರ ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಹಲವು ತಂಡಗಳು ನಮ್ಮನ್ನು ಸಂಪರ್ಕಿಸಿವೆ. ಆಸ್ಟ್ರೇಲಿಯಾ ತಂಡ ಉತ್ಸುಕತೆ ತೋರಿದೆ. ಅವರೊಂದಿಗೆ ಕ್ರೀಡಾ ವಿನಿಮಯದ ಒಪ್ಪಿಗೆಯನ್ನೂ ಮಾಡಿಕೊಳ್ಳಲಾಗಿದೆ. ಅದರಂತೆ ಇನ್ನೂ ಕೆಲವು ತಂಡಗಳು ಮುಂದೆ ಬಂದಿವೆ’ ಎಂದು ತಿಳಿಸಿದ್ದಾರೆ.
ಕೊಚ್ಚಿ: ಕೇರಳದಲ್ಲಿ ಇದೇ ವರ್ಷದ ನವೆಂಬರ್‌ನಲ್ಲಿ ಇನ್ನೂ ಹೆಸರಿಸದ ತಂಡದ ಎದುರು ಫಿಫಾ ಸ್ನೇಹಪರ ಪಂದ್ಯ ಆಡುವುದಾಗಿ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡ ಘೋಷಿಸಿದ್ದು ಮೂಲಕ ಈ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆಯೆಳೆಯಿತು.
ಈ ಪಂದ್ಯ ನವೆಂಬರ್ 10 ರಿಂದ 18ರ ಮಧ್ಯೆ ಒಂದೊ ಕೊಚ್ಚಿ, ಇಲ್ಲವೇ ತಿರುವನಂತಪುರದಲ್ಲಿ ನಡೆಯಲಿದೆ.
‘ಲಯೊನೆಲ್ ಸ್ಕಾಲೊನಿ ತರಬೇತಿಯ ಅರ್ಜೆಂಟೀನಾ ರಾಷ್ಟ್ರೀಯ ತಂಡ 2025ರ ಉಳಿದ ಅವಧಿಯಲ್ಲಿ ಎರಡು ಸ್ನೇಹಪರ ಪಂದ್ಯಗಳನ್ನು ಆಡಲಿದೆ. ಮೊದಲನೆಯದು ಅಕ್ಟೋಬರ್ 6 ರಿಂದ 14 ರಂದು ಅಮೆರಿಕದಲ್ಲಿ (ಎದುರಾಳಿ ಮತ್ತು ತಾಣ ಇನ್ನೂ ನಿರ್ಧಾರವಾಗಬೇಕಿದೆ) ಆಡಲಿದೆ’ ಎಂದು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ ‘ಎಕ್ಸ್’ನಲ್ಲಿ ಬರೆದಿದೆ.
‘ಎರಡೇ ಫಿಫಾ ಸ್ನೇಹಪರ ಪಂದ್ಯಗಳು ನವೆಂಬರ್ 10 ರಿಂದ 18ರ ನಡುವೆ ನಡೆಯಲಿದೆ. ಈ ಪಂದ್ಯಗಳು ಅಂಗೋಲಾದ ಲುವಾಂಡ ಮತ್ತು ಭಾರತದ ಕೊಚ್ಚಿಯಲ್ಲಿ (ಎದುರಾಳಿ ನಿರ್ಧಾರವಾಗಬೇಕಿದೆ) ನಡೆಯಲಿದೆ’ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.