
ಮ್ಯಾರಥಾನ್ ಓಟವನ್ನೂ ಮೀರಿದ ಅಲ್ಟ್ರಾ ರನ್ ಈಗ ಭಾರತದಲ್ಲಿ ಪ್ರವರ್ಧಮಾನದಲ್ಲಿದೆ. ಅಲ್ಟ್ರಾ ರನ್‌ನಲ್ಲೇ ಅತ್ಯಂತ ದುರ್ಗಮವಾದ ಹಾಗೂ ಸವಾಲಿನ ಅಲ್ಟ್ರಾ ಟ್ರೇಲ್ ರನ್ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಒರೆಗೆ ಹಚ್ಚುತ್ತದೆ. ಇದರಲ್ಲಿ ಯಶಸ್ಸು ಕಂಡವರು ಉದ್ಯೋಗ ಮತ್ತು ವೈಯಕ್ತಿಕ ಜೀವನವನ್ನು ಸುಲಲಿತವಾಗಿ ಸಾಗಿಸುತ್ತಿರುವುದು ಓಟಗಾರರ ಅನುಭವದ ಮಾತಿನಿಂದ ತಿಳಿಯುತ್ತದೆ. ಈ ಕಾರಣದಿಂದ ಕಾರ್ಪೊರೇಟ್ ವಲಯದಲ್ಲಿ ಈಗ ಅಲ್ಟ್ರಾ ಓಟಗಳು ಆದ್ಯತೆ ಪಡೆದುಕೊಂಡಿವೆ.
ಇಪ್ಪತ್ತೊಂದು ತಾಸುಗಳೊಳಗೆ ಮುಗಿಸಬೇಕಾಗಿದ್ದ100 ಕಿಮೀ ಹಗಲು–ರಾತ್ರಿ ಓಟವನ್ನು ಸಂಜೆಯೊಳಗೆ, 10 ತಾಸುಗಳಲ್ಲಿ ಮುಗಿಸಿ ಅಚ್ಚರಿಗೊಳಿಸಿ ವಿಶ್ರಾಂತಿ ತಾಣದಲ್ಲಿ ನಿರಾಳವಾಗಿ ಕುಳಿತ ಮಹಾರಾಷ್ಟ್ರದ ವಿಶಾಲ್ ವಳವಿ, 30 ಕಿಮೀ ಓಡಿ ಬಂದು ಸಂಭ್ರಮಿಸಿದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಬೆಳಗಾವಿಯ ಅಶ್ವಿನಿ ದ್ಯಾಮನಗೌಡರ್ ಮತ್ತು ಮೂವರು ಗೆಳತಿಯರು, ಯುವಕರ ಬಳಗದ ಜೊತೆಗೂಡಿ ಓಡಿದ ನಂತರ ಗುಂಪು ಹರಟೆಯಲ್ಲಿ ತೊಡಗಿದ್ದ ಬಳ್ಳಾರಿಯ ಡಾಕ್ಟರ್ ತಿಪ್ಪಾರೆಡ್ಡಿ...
ಭಾರತದಲ್ಲಿ ಈಗ ಪ್ರವರ್ಧಮಾನಕ್ಕೆ ಬಂದಿರುವ ಅಲ್ಟ್ರಾ ಟ್ರೇಲ್ ರನ್ ಎಂಬ ದುರ್ಗಮ ಹಾದಿಯ ಓಟದಲ್ಲಿ ಇಂಥ ನೋಟಗಳು ಸಾಮಾನ್ಯ. ಯಾಕೆಂದರೆ ಅದರಲ್ಲಿ ಪಾಲ್ಗೊಳ್ಳುವವರೆಲ್ಲರೂ ಓಟವನ್ನು ಪ್ರೀತಿಸುವವರು, ಓಟವೇ ಜೀವಾಳ ಎನ್ನುವವರು.
ಉದ್ಯೋಗದ ಒತ್ತಡವನ್ನು ಬದಿಗಿಟ್ಟು ಕಾಡಂಚಿನಲ್ಲಿ, ಕಾಫಿ ತೋಟಗಳ ಕಾಲುದಾರಿಯಲ್ಲಿ ಓಡಿದ ರಾಜ್ಯ ಆಂತರಿಕ ಭದ್ರತಾ ಘಟಕದ ಇನ್‌ಸ್ಪೆಕ್ಟರ್ ಬಸವರಾಜ ಪಶ್ಚಾಪೂರ, ದೂರದೂರುಗಳಿಗೆ ಪಯಣಿಸಿ ಓಟಗಳಲ್ಲಿ ಭಾಗಿಯಾಗುವ ಮಂಗಳೂರು ರನ್ನರ್ಸ್ ಕ್ಲಬ್ ಸದಸ್ಯರು, ಬರಿಗಾಲಲ್ಲಿ ಕಿಲೊಮೀಟರ್‌ಗಟ್ಟಲೆ ಓಡುವ ಎಂಜಿನಿಯರ್ ಹರ್ಷಿತ್ ರಾವ್, ವಾಸುದೇವ ಕಾಮತ್, ಸಹೋದರರಾದ ಓಂ ಶಿವ ಕೋಟ್ಯಾನ್ ಮತ್ತು ವಿಶ್ವನಾಥ ಕೋಟ್ಯಾನ್ ಅವರಿಗೂ ಓಟವೆಂಬುದು ಸದಾ ಖುಷಿಯ ವಿಷಯ.
ಬೃಹತ್ ಗಾತ್ರದ ಕನ್ನಡದ ಧ್ವಜ ಹಿಡಿದು ಓಟ ಮುಕ್ತಾಯಗೊಳಿಸುವ ಬೆಂಗಳೂರಿನ ಕೆ.ವಿ ಸುರೇಶ್ ಅವರಂಥವರೇನು ಕಡಿಮೆಯೇ. ದೇಹದ ಬಳಲಿಕೆಯನ್ನು ಬದಿಗಿಟ್ಟು ಹಾಗೆ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸುವವರೂ ಇದ್ದಾರೆ ದೇಶದಲ್ಲಿ. ಅಲ್ಲಲ್ಲಿ ಆಗಾಗ ನಡೆಯುವ ದೂರ ಓಟಗಳು ಪ್ರತಿ ಓಟಗಾರರ ಕ್ರೀಡಾ ಬದುಕಿನ ಹೊಸ ಆಯಾಮಕ್ಕೆ ದಾರಿಯಾಗುತ್ತವೆ. ನವೆಂಬರ್ ಕೊನೆಯ ವಾರ ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ನಡೆದ ಮಲೆನಾಡು ಅಲ್ಟ್ರಾ ಟ್ರೇಲ್ ರನ್, ವಿಶಾಲ್ ವಳವಿ ಅವರ ಜೀವನಶ್ರೇಷ್ಠ ಸಾಧನೆಗೆ ವೇದಿಕೆಯಾದದ್ದು ಹೀಗೆಯೇ.
ಅಲ್ಟ್ರಾ ಓಟದಲ್ಲಿ ಎರಡು ಬಗೆ ಇದೆ. ಒಂದು ರೋಡ್ ರೇಸ್, ಮತ್ತೊಂದು ಟ್ರೇಲ್ ರನ್. ಟ್ರೇಲ್ ರನ್ ಅತ್ಯಂತ ಸವಾಲಿನದ್ದು. 30 ಕಿಮೀ, 50 ಕಿಮೀ, 100 ಕಿಮೀ, 120 ಕಿಮೀ, 160 ಕಿಮೀ ಮುಂತಾದ ವಿಭಾಗಗಳು ಇರುವ ಇದರಲ್ಲಿ ಗುಡ್ಡ–ಕಾಡು, ತೋಟ–ತೊರೆ, ಎತ್ತರ–ತಗ್ಗುಗಳನ್ನು ದಾಟಿ ಸಾಗಬೇಕು. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಓಟಗಾರರು ಮುನ್ನುಗ್ಗಬೇಕು.
100 ಕಿಮೀಗೂ ಅಧಿಕ ದೂರದ ಓಟ ಹಗಲು ಮತ್ತು ರಾತ್ರಿ ಇರುತ್ತದೆ. ರಾತ್ರಿಯಷ್ಟೇ ನಡೆಯುವ 50 ಕಿಮೀ ಅಂತರದ ಓಟವೂ ಇರುತ್ತದೆ. ಹಣೆಗೆ ಟಾರ್ಚ್ ಕಟ್ಟಿಕೊಂಡು, ರೇಡಿಯಂ ಟ್ಯಾಗ್‌ಗಳು ತೋರಿಸುವ ಹಾದಿಯ ಜಾಡು ಹಿಡಿದು ಸಾಗುವ ಓಟಗಾರರು ಪ್ರಕೃತಿಯ ರಾತ್ರಿ ಸೊಬಗು ಸವಿಯುವುದರೊಂದಿಗೆ ದಾರಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ತಾವೇ ಉತ್ತರ ಕಂಡುಕೊಳ್ಳಬೇಕು. ಓಟ ಆರಂಭವಾಗುವುದು ಗುಂಪಿನಲ್ಲಿ. ಮುಂದೆ ಸಾಗಿದಂತೆ ಕೆಲವು ಸಂದರ್ಭದಲ್ಲಿ ಒಬ್ಬಂಟಿಯಾಗುವ ಸಾಧ್ಯತೆ ಇರುತ್ತದೆ. ಎರಡು ಕಿಮೀಗೆ ಒಂದರಂತೆ ‘ನೆರವು ಕೇಂದ್ರ’ಗಳು ಇರುತ್ತವೆ. ಅಲ್ಲಿ ಆಹಾರ, ನೀರು, ವೈದ್ಯಕೀಯ ಸೇವೆ ಮತ್ತು ಅಗತ್ಯ ಬಿದ್ದರೆ ಮುಂದಿನ ಹಾದಿಯ ಮಾರ್ಗದರ್ಶನ ಸಿಗುತ್ತದೆ. ಅದನ್ನು ದಾಟಿದ ನಂತರ ಮತ್ತೆ ಏಕಾಂಗಿಯಾಗಿ ಅಥವಾ ಸಣ್ಣ ಗುಂಪಿನಲ್ಲಿ ಓಡಬೇಕು.
ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್‌ನ ಹೆಚ್ಚಿನ ಅವಧಿ ಕಾಫಿತೋಟಗಳ ನಡುವೆ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಕಾಡಂಚಿನ ಮೂಲಕ ಹೋಗಬೇಕು. ಗುಡ್ಡ ಹತ್ತಬೇಕು, ಇಳಿಯಬೇಕು. ಕೆಸರು ತುಳಿದು ಓಡಬೇಕು. ಈ ಎಲ್ಲ ಸಂದರ್ಭದಲ್ಲೂ ಓಟಗಾರರ ಜೊತೆ ಇರುವುದು ಧೈರ್ಯ ಮತ್ತು ಸ್ಥೈರ್ಯ ಮಾತ್ರ. ಫಿಟ್‌ನೆಸ್‌ನ ರಾಜ ಎಂದೇ ಬಣ್ಣಿಸಲಾಗುವ ಓಟವು ದೈಹಿಕ ಮತ್ತು ಮಾನಸಿಕ ಅರೋಗ್ಯದ ಮೇಲೆ ಬೀರುವ ಪ್ರಭಾವದ ಬಗ್ಗೆ ಈಗ ಹೆಚ್ಚು ಪ್ರಚಾರ ಆಗುತ್ತಿದೆ. ಅದನ್ನು ತಿಳಿದುಕೊಂಡವರು ಆರೋಗ್ಯ ಸಂರಕ್ಷಣೆಯ ಜೊತೆಯಲ್ಲಿ ಸಾಹಸ ಮಾಡುವ ಉಮೇದನ್ನೂ ಇರಿಸಿಕೊಂಡು ಓಟದ ಕಣಕ್ಕೆ ಇಳಿಯುತ್ತಿದ್ದಾರೆ.
‘100 ಕಿಮೀ ಓಡುವುದೇ ದೊಡ್ಡ ಸವಾಲು. ಅದನ್ನು ಸಾಧಿಸಿದವರಿಗೆ ಉದ್ಯೋಗದ ಸ್ಥಳದಲ್ಲಿ ಅಥವಾ ಜೀವನದಲ್ಲಿ ಎದುರಾಗುವ ಒತ್ತಡ ಯಾವ ಲೆಕ್ಕ? ಮೂರು ವರ್ಷಗಳ ಹಿಂದೆ ಓಡಲು ಶುರು ಮಾಡಿದ ನಂತರ ನನ್ನ ಚಿತ್ತ ಶಾಂತವಾಗಿದೆ. ಬದುಕಿನಲ್ಲಿ ಏನೇ ಬಂದರೂ ಎದುರಿಸಲು ಮನಸ್ಸು ಪಾಕಗೊಂಡಿದೆ' ಎನ್ನುತ್ತಾರೆ ಕರ್ನಾಟಕ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಇನ್‌ಸ್ಪೆಕ್ಟರ್, 39 ವರ್ಷದ ಬಸವರಾಜ ಪಶ್ಚಾಪೂರ.
ಇಲಾಖೆಯಲ್ಲಿ ಪ್ರತಿ ವರ್ಷ ಆರೋಗ್ಯ ತಪಾಸಣೆ ನಡೆಯುತ್ತದೆ. ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಪ್ರಮಾಣ ಯಾವುದೂ ಒಂದು ಪಾಯಿಂಟ್ ಕೂಡ ಹೆಚ್ಚಾಗಲಿಲ್ಲ. 87 ಕೆಜಿ ಇದ್ದ ದೇಹ ತೂಕ ಈಗ 69–70ರ ಆಸುಪಾಸಿನಲ್ಲೇ ಇದೆ. ಹೀಗಾಗಿ ಓಟದ ಖುಷಿಯನ್ನು ಪರಿಪೂರ್ಣವಾಗಿ ಅನುಭವಿಸುತ್ತಿದ್ದೇನೆ' ಎನ್ನುತ್ತಾರೆ ಬಸವರಾಜ.
ಬಳ್ಳಾರಿಯ ಡಾ.ತಿಪ್ಪಾರೆಡ್ಡಿ ತಮ್ಮ ಬಳಿಗೆ ಬರುವವರ ಜೀವನಶೈಲಿ ರೋಗಗಳನ್ನು ಕಂಡು ಓಟದ ‘ಟ್ರ್ಯಾಕ್’ಗೆ ಇಳಿದವರು. 65 ವರ್ಷ ವಯಸ್ಸಿನ ಅವರು ಈಗ ಯುವಕರ ತಂಡವನ್ನು ಕಟ್ಟಿಕೊಂಡು ಓಟದಲ್ಲಿ ಪಾಲ್ಗೊಳ್ಳುತ್ತಾರೆ. ಮಲೆನಾಡು ಅಲ್ಟ್ರಾದಲ್ಲಿ 30 ಕಿಮೀ ಓಟವನ್ನು 3.35 ತಾಸುಗಳಲ್ಲಿ ಪೂರ್ಣಗೊಳಿಸಿದ್ದ ಅವರು ತಮ್ಮ ಜೊತೆ ಓಡಿದ ಯುವಕರ ಪೈಕಿ ಕೆಲವರಿಗಿಂತ ಮೊದಲೇ ಗುರಿ ತಲುಪಿದ್ದರು.
ಚೆನ್ನೈನ ಸರವಣನ್ ಆರೋಗ್ಯ ರಕ್ಷಣೆ, ಮಾನಸಿಕ ಸ್ಥೈರ್ಯ ಮತ್ತು ಪ್ರಕೃತಿಯ ಸೌಂದರ್ಯ ಸವಿಯುವುದಕ್ಕಾಗಿ ಅಲ್ಟ್ರಾ ರೇಸ್‌ಗಳು, ವಿಶೇಷವಾಗಿ ಟ್ರೇಲ್ ಅಲ್ಟ್ರಾಗಳಲ್ಲಿ ಪಾಲ್ಗೊಳ್ಳುತ್ತಾರೆ.
‘ಮಲೆನಾಡು ಅಲ್ಟ್ರಾದಲ್ಲಿ ನಾಲ್ಕು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ಇಲ್ಲಿ ಓಟದ ಹಾದಿ ಬಹಳ ಸುಂದರ, ರೋಚಕ. ಓಟ, ನನ್ನ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಿದೆ’ ಎನ್ನುತ್ತಾರೆ ಅವರು.
ಬರಿಗಾಲಲ್ಲೂ ಓಡುತ್ತಾರೆ
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಹರ್ಷಿತ್ ರಾವ್, ಮಂಗಳೂರಿನ ವಿಶ್ವನಾಥ ಕೋಟ್ಯಾನ್, ಓಂ ಶಿವ ಕೋಟ್ಯಾನ್ ಮತ್ತು ವಾಸುದೇವ ಕಾಮತ್ ಅವರಂತೆ ಬರಿಗಾಲಲ್ಲಿ ಓಡುವವರದು ವಿಶಿಷ್ಟ ಸಾಹಸ.
ಹರ್ಷಿತ್ ರಾವ್ ನೊವಿಗೊ ಸೊಲ್ಯುಷನ್ ಸೆಂಟರ್‌ನ ಎಂಜಿನಿಯರ್. ಮೂರು ವರ್ಷಗಳಲ್ಲಿ ಒಟ್ಟು 45 ಓಟಗಳಲ್ಲಿ ಪಾಲ್ಗೊಂಡಿದ್ದಾರೆ. ಊಟಿ ಅಲ್ಟ್ರಾದಲ್ಲಿ 60 ಕಿಮೀ ಓಡಿದ್ದಾರೆ. ಮಲ್ಲಂದೂರಿನಲ್ಲಿ ಇತರ ಮೂವರ ಜೊತೆ 50 ಕಿಮೀ ಓಡಿದ್ದರು.
ಸುದೀರ್ಘ ಇತಿಹಾಸದ ಅಲ್ಟ್ರಾ ರನ್
ಮೊದಲ ಅಲ್ಟ್ರಾ ಮ್ಯಾರಥಾನ್ ಇಂಗ್ಲೆಂಡ್‌ನಲ್ಲಿ 1954ರಲ್ಲಿ ನಡೆಯಿತು ಎಂದು ದಾಖಲೆಗಳು ಹೇಳುತ್ತವೆ. 1968ರಲ್ಲಿ ಅಮೆರಿಕದಲ್ಲೂ ನಡೆಯಿತು. ಈಗ ಪ್ರಪಂಚದಾದ್ಯಂತ ಪ್ರಚುರಗೊಂಡಿದೆ. ಭಾರತದ ಪ್ರಮುಖ ಅಲ್ಟ್ರಾ ಮ್ಯಾರಥಾನ್ ಮಹಾರಾಷ್ಟ್ರದ ‘ಇಂಡಿಯಾ ಅಲ್ಟ್ರಾ ಮ್ಯಾರಥಾನ್'. ಇದರಲ್ಲಿ 100 ಕಿಮೀ ಓಟ ಇರುತ್ತದೆ. ಪುಣೆಯ ಶಿವನೇರಿ ಕೋಟೆಯಿಂದ ಆರಂಭಗೊಂಡು ಸಹ್ಯಾದ್ರಿ ಬೆಟ್ಟಗಳ ಮೋಹಕ ಪರಿಸರದಲ್ಲಿ ಸಾಗುತ್ತದೆ. 17,618 ಅಡಿ ಎತ್ತರದ ಗುಡ್ಡಗಳನ್ನು ಏರಿ ಇಳಿಯುವ 122 ಕಿಮೀ ಓಟದ ಛಲವಂತರ 'ಲಡಾಖ್ ಮ್ಯಾರಥಾನ್' ಕೂಡ ರೋಚಕ. ದೇಶದಲ್ಲಿ ಕ್ರೀಡಾ ಸಂಸ್ಥೆಗಳು ಆಯೋಜಿಸುವ 200ರಷ್ಟು ಅಲ್ಟ್ರಾ ರನ್‌ಗಳು ಇವೆ. ಒಂದೂವರೆ ಲಕ್ಷದಷ್ಟು ವೃತ್ತಿಪರ ಓಟಗಾರರು ದೇಶದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.