
ನವದೆಹಲಿ: ಒಲಿಂಪಿಕ್ ಅವಳಿ ಪದಕ ವಿಜೇತೆ ಮನು ಭಾಕರ್ ಮತ್ತು ಕೈರೊ ವಿಶ್ವಕಪ್ ಫೈನಲ್ ಚಾಂಪಿಯನ್ ಸಿಮ್ರನ್‌ಪ್ರೀತ್ ಕೌರ್ ಬ್ರಾರ್ ಅವರು ಇಲ್ಲಿ ನಡೆಯುತ್ತಿರುವ 68ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕ್ರಮವಾಗಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟರು.
ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ 36 ಅಂಕಗಳೊಂದಿಗೆ ಹರಿಯಾಣದ ಮನು ಅಗ್ರಸ್ಥಾನಿಯಾದರು. ಕರ್ನಾಟಕದ ಉದಯೋನ್ಮುಖ ಶೂಟರ್ ದಿವ್ಯಾ ಟಿ.ಎಸ್. 32 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಹರಿಯಾಣದ ಅಂಜಲಿ ಚೌಧರಿ (28) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ದಿವ್ಯಾ 587 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಮನು (581) ನಾಲ್ಕನೇ ಸ್ಥಾನ ಗಳಿಸಿದರು. ಅಂಜಲಿ ಚೌಧರಿ (582) ಮತ್ತು ಅನ್ನು ರಾಜ್ ಸಿಂಗ್ (582) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
ಜೂನಿಯರ್ ವಿಭಾಗದಲ್ಲಿ ಸಿಮ್ರನ್‌ಪ್ರೀತ್ 39 ಅಂಕಗಳೊಂದಿಗೆ ಚಿನ್ನ ಗೆದ್ದರು. ಆಂಧ್ರಪ್ರದೇಶದ ದ್ವಾರಂ ಪ್ರಣವಿ ಬೆಳ್ಳಿ ಪದಕ ಗೆದ್ದರೆ, ಹರಿಯಾಣದ ಪಾಲಕ್ ಕಂಚಿನ ಪದಕ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.