ADVERTISEMENT

ಐಒಎ ಅಂತಃಕಲಹ ಕೊನೆಗೊಳಿಸಲು ಬಾತ್ರಾ ಮನವಿ

ಪಿಟಿಐ
Published 29 ಜೂನ್ 2020, 8:28 IST
Last Updated 29 ಜೂನ್ 2020, 8:28 IST
ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ನರಿಂದರ್‌ ಬಾತ್ರಾ
ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ನರಿಂದರ್‌ ಬಾತ್ರಾ   

ನವದೆಹಲಿ: ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಬಾಗಿಲವರೆಗೂ ತಲುಪಿರುವ ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಂತಃಕಲಹ ಕೊನೆಯಾಗಲಿ ಎಂದು ಐಒಎ ಅಧ್ಯಕ್ಷ ನರಿಂದರ್‌ ಬಾತ್ರಾ ಭಾನುವಾರ ಮನವಿ ಮಾಡಿಕೊಂಡಿದ್ದಾರೆ.

ಬಾತ್ರಾ ಹಾಗೂ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ ನಡುವೆ ಈ ಜಗಳ ಶುರುವಾಗಿತ್ತು. ಐಒಎ ಉನ್ನತ ಸ್ಥಾನಕ್ಕೆ ಬಾತ್ರಾ ಅವರ ಆಯ್ಕೆಯ ಸಿಂಧುತ್ವದ ಪ್ರಶ್ನೆಗಳು ಏಳುತ್ತಿದ್ದಂತೆ ಒಳಜಗಳ ತಾರಕಕ್ಕೇರಿತ್ತು.

‘ಸಂಸ್ಥೆಯಲ್ಲಿ ನಡೆಯುತ್ತಿರುವ ಕಲಹವನ್ನು ಕೊನೆಗೊಳಿಸುವಂತೆ ಅಧಿಕಾರಿಗಳು ಹಾಗೂ ಸದಸ್ಯರಲ್ಲಿ ಕೋರಿಕೊಳ್ಳುತ್ತೇನೆ. ಆಯಾ ಕ್ರೀಡೆಗಳ ಅಥ್ಲೀಟ್‌ಗಳ ಹಿತಾಸಕ್ತಿ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಬಾತ್ರಾ ಹೇಳಿಕೆ ನೀಡಿದ್ದಾರೆ.

ADVERTISEMENT

ಐಒಎ ಅಧಿಕಾರಿಗಳ ನಡುವಿನ ಈ ಸಣ್ಣ ಪ್ರಮಾಣದ ಕಲಹ ಐಒಸಿ ಹಾಗೂ ವಿಶ್ವ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಅಂಗಳಕ್ಕೆ ತಲುಪಿತ್ತು. ಐಒಎ ಹಾಗೂ ಎಫ್‌ಐಎಚ್‌ ಎರಡೂ ಸಂಸ್ಥೆಗಳ ಮುಖ್ಯಸ್ಥ ಹುದ್ದೆಗೆ ಬಾತ್ರಾ ಅವರ ಆಯ್ಕೆಯನ್ನು ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದರು.

ಮೆಹ್ತಾ ಮೇಲಿರುವ ಕೆಲಸದ ‘ಹೊರೆ’ಯನ್ನು ಕಡಿಮೆ ಮಾಡಲು ಅವರ ಕೆಲವು ಜವಾಬ್ದಾರಿಗಳನ್ನು ತಾನು ವಹಿಸಿಕೊಳ್ಳುವುದಾಗಿ ಬಾತ್ರಾ ಹೇಳಿದ ಬಳಿಕ ಐಒಎನಲ್ಲಿ ಅಧಿಕಾರಕ್ಕಾಗಿ ಮೇಲಾಟ ಶುರುವಾಗಿತ್ತು. ಉಪಾಧ್ಯಕ್ಷರಲ್ಲಿ ಒಬ್ಬರಾದ ಸುಧಾಂಶು ಮಿತ್ತಲ್‌ ಅವರು ಬಾತ್ರಾ ಅವರ ಆಯ್ಕೆಯ ಕುರಿತು ಅಂತರರಾಷ್ಟ್ರೀಯ ತನಿಖೆಗೆ ಒತ್ತಾಯಿಸುವವರೆಗೆಮುಂದುವರಿದಿತ್ತು. ಮಿತ್ತಲ್‌ ಅವರ ಬೇಡಿಕೆಯನ್ನು ಐಒಸಿ ಹಾಗೂ ಎಫ್‌ಐಎಚ್‌ ತಿರಸ್ಕರಿಸಿದ್ದವು.

ಕೊರೊನಾ ಬಿಕ್ಕಟ್ಟಿನ ನಂತರ ದೇಶದಲ್ಲಿ ಕ್ರೀಡಾ ಚಟುವಟಕೆಗಳನ್ನು ಪುನರಾರಂಭಿಸುವ ಕುರಿತಂತೆ ಬಾತ್ರಾ ಹಾಗೂ ಮೆಹ್ತಾ ಅವರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅಕ್ಟೋಬರ್‌ನಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸುವ ಇಂಗಿತ ಬಾತ್ರಾ ಅವರದಾಗಿದ್ದರೆ, ಕೋವಿಡ್‌ ಪ್ರಕರಣಗಳನ್ನು ಹೆಚ್ಚುತ್ತಿರುವ ವೇಳೆಯಲ್ಲಿ ಅಥ್ಲೀಟ್‌ಗಳನ್ನು ತರಬೇತಿ ಅಥವಾ ಸ್ಪರ್ಧೆಗೆ ಇಳಿಸಲು ಆತುರ ಪಡಬಾರದು ಎಂದು ಮೆಹ್ತಾ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.