ADVERTISEMENT

ಫಿಡೆ ರೇಟೆಡ್ ರಾಷ್ಟ್ರೀಯ ಚೆಸ್ ಟೂರ್ನಿ: ಐಎಂಗೆ ಸೋಲುಣಿಸಿದ 11ರ ಪೋರ ಇಶಾನ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 14:17 IST
Last Updated 29 ಡಿಸೆಂಬರ್ 2025, 14:17 IST
ಇಶಾನ್ ಭನ್ಸಾಲಿ
ಇಶಾನ್ ಭನ್ಸಾಲಿ   

ಮಂಗಳೂರು: ಇಂಟರ್‌ನ್ಯಾಷನಲ್ ಮಾಸ್ಟರ್ ಬಾಲಸುಬ್ರಮಣ್ಯಂ ರಾಮನಾಥನ್ ವಿರುದ್ಧ ಜಯ ಸಾಧಿಸಿ ಕರ್ನಾಟಕದ 11 ವರ್ಷದ ಬಾಲಕ ಇಶಾನ್ ಭನ್ಸಾಲಿ ಇಲ್ಲಿ ನಡೆಯುತ್ತಿರುವ ಫಿಡೆ ರೇಟೆಡ್ ರಾಷ್ಟ್ರೀಯ ಕ್ಲಾಸಿಕಲ್ ಚೆಸ್ ಟೂರ್ನಿಯ ನಾಲ್ಕನೇ ದಿನವಾದ ಸೋಮವಾರ ಗಮನ ಸೆಳೆದರು. 

ಬಾಲಸುಬ್ರಮಣ್ಯಂ ಅವರಿಗೆ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ನೀಡಿದ್ದು 2039 ರೇಟಿಂಗ್ ಹೊಂದಿದ್ದಾರೆ. 1863 ರೇಟಿಂಗ್ ಇರುವ, 13ನೇ ಶ್ರೇಯಾಂಕಿತ ಇಶಾನ್ 8 ಸುತ್ತಗಳ ಮುಕ್ತಾಯಕ್ಕೆ 7 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಏಕೈಕ ಆಟಗಾರ ಎನಿಸಿಕೊಂಡರು. 

ಅಗ್ರ ಶ್ರೇಯಾಂಕಿತ ಕೇರಳದ ಮಾರ್ತಾಂಡನ್ ಸೇರಿದಂತೆ ಐವರು 6.5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಉತ್ತಮ ಟೈ ಬ್ರೇಕರ್‌ ಆಧಾರದಲ್ಲಿ ಗೋವಾದ ಜೋಶುವಾ ಟೆಲಿಸ್ ಎರಡನೇ ಸ್ಥಾನದಲ್ಲಿರುವವರ ಪಟ್ಟಿಯಲ್ಲಿ ಮೊದಲಿಗರಾಗಿದ್ದು ಕರ್ನಾಟಕದ ಗವಿಸಿದ್ದಯ್ಯ, ಗುಜರಾತ್‌ನ ಅಡಲ್ಜಾ ವಂಶ್‌ ಮತ್ತು ತಮಿಳುನಾಡಿನ ವಿಘ್ನೇಶ್ವರನ್ ಪಟ್ಟಿಯಲ್ಲಿರುವ ಇತರರು. 11 ವಯಸ್ಸಿನ ಮಹಾರಾಷ್ಟ್ರ ಆಟಗಾರ ವಿಹಾನ್ ರಾವ್ ಎದುರು 4ನೇ ಸುತ್ತಿನಲ್ಲಿ ಸೋತಿದ್ದ ಮಾರ್ತಾಂಡನ್ ನಂತರದ ಸುತ್ತುಗಳಲ್ಲಿ ಚೇತರಿಸಿಕೊಂಡರೂ ಅಗ್ರಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ. ಮಂಗಳವಾರ ನಡೆಯಲಿರುವ ಕೊನೆಯ ಸುತ್ತಿನಲ್ಲಿ ಇಶಾನ್ ಭನ್ಸಾಲಿ ವಿರುದ್ಧ ಮಾರ್ತಾಂಡನ್ ಸೆಣಸುವರು. 

ADVERTISEMENT

ಎಂಟನೇ ಸುತ್ತಿನ ಪ್ರಮುಖ ಫಲಿತಾಂಶಗಳು: ಇಶಾನ್ ಭನ್ಸಾಲಿಗೆ ಬಾಲಸುಬ್ರಹ್ಮಣ್ಯಂ ರಾಮನಾಥನ್ ವಿರುದ್ಧ ಗೆಲುವು; ಮಾರ್ತಾಂಡನ್‌ಗೆ ಸಂಜಯ್ ಸಿಂಧಿಯಾ ವಿರುದ್ಧ, ಅಡಲ್ಜಾ ವಂಶ್‌ಗೆ ಸನೂಸ್ ಶಿಬು ವಿರುದ್ಧ ಜಯ. ಗವಿಸಿದ್ದಯ್ಯ ಮತ್ತು ವಿಘ್ನೇಶ್ವರನ್‌, ಜೋಶುವಾ ಮತ್ತು ಅನಿಲ್ ಕುಮಾರ್, ಇಂದ್ರಜಿತ್‌ ಮತ್ತು ಸಿದ್ಧಾರ್ಥ್‌, ಅಜೀಶ್ ಆ್ಯಂಟನಿ ಮತ್ತು ಋಷಿಕೇಶ್‌, ವೆಂಕಟನಾಗ ಮತ್ತು ರವೀಶ್ ಕೋಟೆ, ಜೋಶ್ವಿನ್ ಮತ್ತು ವೈಷ್ಣವ್ ನಡುವಿನ ಪಂದ್ಯ ಡ್ರಾ.