ADVERTISEMENT

ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಭಾಗಶಃ ಜಾರಿ: ಕ್ರೀಡಾ ಸಚಿವಾಲಯ

ರಾಷ್ಟ್ರೀಯ ಕ್ರೀಡಾ ಮಂಡಳಿ, ಕ್ರೀಡಾ ನ್ಯಾಯಮಂಡಳಿ ಸ್ಥಾಪನೆಗೆ ದಾರಿ

ಪಿಟಿಐ
Published 1 ಜನವರಿ 2026, 15:32 IST
Last Updated 1 ಜನವರಿ 2026, 15:32 IST
ಮನ್ಸುಖ್ ಮಾಂಡವೀಯ
ಮನ್ಸುಖ್ ಮಾಂಡವೀಯ   

ನವದೆಹಲಿ: ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯು ಗುರುವಾರದಿಂದ ಭಾಗಶಃ ಜಾರಿಗೆ ಬಂದಿದೆ. ಈ ಕಾಯ್ದೆಯು ಶಕ್ತಿಶಾಲಿ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ) ಮತ್ತು ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಟ್ರಿಬ್ಯೂನಲ್‌) ಸ್ಥಾಪನೆಗೆ ದಾರಿಮಾಡಿಕೊಡಲಿದೆ.

2025ರ ಆಗಸ್ಟ್‌ 18ರಂದು ಈ ಕಾಯ್ದೆಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದು ದೇಶದ ಕ್ರೀಡಾ ಕ್ಷೇತ್ರದ ಇತಿಹಾಸದಲ್ಲೇ ಅತಿ ದೊಡ್ಡ ಸುಧಾರಣಾ ಕ್ರಮ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಬಣ್ಣಿಸಿದ್ದರು.

ಈ ಕಾಯ್ದೆಯ ಕೆಲವು ಸೆಕ್ಷನ್‌ಗಳು ಮತ್ತು ಸಬ್‌ ಸೆಕ್ಷನ್‌ಗಳು ಜನವರಿ 1ರಿಂದ ಜಾರಿಗೆ ಬಂದಿವೆ ಎಂದು ಕ್ರೀಡಾ ಸಚಿವಾಲಯ ಬುಧವಾರ ತಡರಾತ್ರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಈ ಕಾಯ್ದೆಯ ‍ಪ್ರಕಾರ, ಭಾರತ ಒಲಿಂಪಿಕ್‌ ಸಂಸ್ಥೆ, ರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿ, ಕ್ರೀಡಾ ಸಂಸ್ಥೆಗಳು, ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು (ಎನ್‌ಎಸ್‌ಎಫ್‌) 15 ಸದಸ್ಯರನ್ನು ಮೀರದಂತೆ ಕಾರ್ಯಕಾರಿ ಸಮಿತಿಗಳನ್ನು ರಚಿಸಬೇಕಾಗುತ್ತದೆ. ಇದರಲ್ಲಿ ಕನಿಷ್ಠ ಇಬ್ಬರು ಯೋಗ್ಯ ಕ್ರೀಡಾಪಟುಗಳು ಇರುವುದು ಕಡ್ಡಾಯವಾಗಿದೆ.

ರಾಷ್ಟ್ರೀಯ ಕ್ರೀಡಾ ಮಂಡಳಿ ಮತ್ತು ರಾಷ್ಟ್ರೀಯ ಕ್ರೀಡಾ ಟ್ರಿಬ್ಯೂನಲ್ ಸ್ಥಾಪನೆ ಪ್ರಕ್ರಿಯೆಗೂ ಚಾಲನೆ ದೊರಕಲಿದೆ.

ಕ್ರೀಡಾ ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ. ಸಮರ್ಥ, ಸಚ್ಚಾರಿತ್ರ್ಯವುಳ್ಳ ಕ್ರೀಡಾಪಟುಗಳನ್ನು, ಸಾರ್ವಜನಿಕ ಆಡಳಿತ, ಕ್ರೀಡಾಡಳಿತ, ಕ್ರೀಡಾ ನಿಯಮಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನುರಿತವರನ್ನು ನೇಮಕ ಮಾಡುವಂತೆ ಕಾಯ್ದೆಯಲ್ಲಿ ತಿಳಿಸಲಾಗಿದೆ. ಶೋಧನಾ ಮತ್ತು ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ನೇಮಕಗಳು ನಡೆಯಲಿದೆ.

ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಿಗದಿಯಾಗಿರುವ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ, ಅದನ್ನು ಡಿಸೆಂಬರ್‌ವರೆಗೆ ಮುಂದೂಡಲು ಸಚಿವಾಲಯವು ಅವಕಾಶ ನೀಡಿದೆ. ಹೀಗಾಗಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಚುನಾವಣೆ ಸಹ ವರ್ಷಾಂತ್ಯಕ್ಕೆ ನಡೆಯಲಿದೆ.

ಕ್ರೀಡಾ ಫೆಡರೇಷನ್‌ಗಳು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಬೇಕಾದರೆ ರಾಷ್ಟ್ರೀಯ ಕ್ರೀಡಾ ಮಂಡಳಿಯ ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಮಂಡಳಿ ಸದಸ್ಯರ ಗರಿಷ್ಠ ವಯೋಮಿತಿಯನ್ನು 65ಕ್ಕೆ ನಿಗದಿಪಡಿಸಲಾಗಿದೆ. ವಯಸ್ಸಿನ ನಿಬಂಧನೆಗೊಳಪಟ್ಟು ಸದಸ್ಯರು ಮತ್ತೊಂದು ಅವಧಿಗೆ ನೇಮಕಗೊಳ್ಳಬಹುದಾಗಿದೆ.

ಕ್ರೀಡಾ ಸಂಬಂಧಿ ವ್ಯಾಜ್ಯಗಳನ್ನು ನಿಭಾಯಿಸುವ ಉದ್ದೇಶದಿಂದ ಕ್ರೀಡಾ ನ್ಯಾಯಮಂಡಳಿ ರೂಪಿಸಲಾಗುತ್ತಿದೆ. ಈಗಾಗಲೇ ಉಲ್ಲೇಖಿಸಿರುವ ನಿಯಮಗಳ ಪ್ರಕಾರ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ ಸದಸ್ಯರ ಗರಿಷ್ಠ ವಯೋಮಿತಿಯನ್ನು 67ಕ್ಕೆ ನಿಗದಿಪಡಿಸಲಾಗಿದೆ. 

ಕ್ರೀಡಾ ಫೆಡರೇಷನ್‌ಗಳು ಮತ್ತು ಇತರ ಕ್ರೀಡಾ ಸಂಸ್ಥೆಗಳ ಚುನಾವಣೆಗಳನ್ನು ಸುಗಮವಾಗಿ ನಡೆಸಲು ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿಯನ್ನು (ಎನ್‌ಎಸ್‌ಇಪಿ) ಸ್ಥಾಪಿಸುವ ಪ್ರಕ್ರಿಯೆಯೂ ಬಾಕಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.