ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ | ನೀರಜ್ ಚೋಪ್ರಾ ಸಾರಥ್ಯ

ಕಾಮನ್‌ವೆಲ್ತ್ ಕೂಟ: ರಾಜ್ಯದ ಮನು, ಐಶ್ವರ್ಯಾಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 19:45 IST
Last Updated 16 ಜೂನ್ 2022, 19:45 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ    

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕವಿಜೇತ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಭಾರತ ಅಥ್ಲೆಟಿಕ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ.

ಕರ್ನಾಟಕದ ಜಾವೆಲಿನ್ ಪಟು ಡಿ.ಪಿ. ಮನು ಮತ್ತು ಲಾಂಗ್‌ಜಂಪ್, ಟ್ರಿಪಲ್ ಜಂಪ್ ಅಥ್ಲೀಟ್ ಮೇಘನಾ ಬಾಬು ಅವರೂ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. 18 ಮಹಿಳಾ ಅಥ್ಲೀಟ್‌ಗಳು ಇರುವ ಒಟ್ಟು 37 ಜನರ ತಂಡವನ್ನು ಗುರುವಾರ ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ ಪ್ರಕಟಿಸಿದೆ. ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾ ದಾಸ್, ಒಲಿಂಪಿಯನ್ ದ್ಯುತಿ ಚಾಂದ್ ಅವರು ಮಹಿಳೆಯರ 4X100 ಮೀಟರ್ ರಿಲೆ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. 100 ಮೀಟರ್ಸ್ ಓಟದಲ್ಲಿ ಎಸ್‌ ಧನಲಕ್ಷ್ಮೀ ಸ್ಪರ್ಧಿಸುವರು.

ಈಚೆಗೆ ನಡೆದ ಸ್ಪರ್ಧೆಗಳಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆಗಳನ್ನು ಉತ್ತಮ ಪಡಿಸಿಕೊಂಡ 3000 ಮೀಟರ್ ಸ್ಟೀಪಲ್‌ಚೇಸರ್ ಅವಿನಾಶ್ ಸಬ್ಳೆ ಮತ್ತು 100 ಮೀ ಹರ್ಡಲ್ಸ್‌ ಓಟಗಾರ್ತಿ ಜ್ಯೋತಿ ಯರಾಜಿ ಅವರಿಗೂ ಸ್ಥಾನ ಲಭಿಸಿದೆ.ಮೇಘನಾ ಅವರು ಈಚೆಗೆ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಟ್ರಿಪಲ್‌ ಜಂಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಅರ್ಹತೆ ಗಿಟ್ಟಿಸಿದ್ದಾರೆ. ಆದರೆ, 200 ಮೀಟರ್ಸ್ ಓಟದಲ್ಲಿ ದಾಖಲೆ ಬರೆದಿದ್ದ ಅಮ್ಲಾನ್ ಬೊರ್ಗೊಹೈನ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಅವರು ಕಾಮನ್‌ವೆಲ್ತ್ ಕೂಟದ ಅರ್ಹತೆ ಮಟ್ಟವನ್ನು ತಲುಪಿರಲಿಲ್ಲ.

ADVERTISEMENT

‘ಸೀಮಾ ಪೂನಿಯಾ ಅವರಿಗೆ ಅಮೆರಿಕದಲ್ಲಿ ವಿಶೇಷ ತರಬೇತಿ ನೀಡಲು ಅವಕಾಶ ನೀಡಲಾಗಿದೆ. ಅವರು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದು ಅವರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ’ ಎಂದು ಎಎಫ್‌ಐ ಅಧ್ಯಕ್ಷ ಆದಿಲೆ ಸುಮರಿವಾಲಾ ತಿಳಿಸಿದ್ದಾರೆ.

ಕಾಮನ್‌ವೆಲ್ತ್ ಕೂಟವು ಜುಲೈ 28ರಿಂದ ಆಗಸ್ಟ್ 8ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.

ತಂಡ: ಪುರುಷರು: ನೀರಜ್ ಚೋಪ್ರಾ, ಡಿ.ಪಿ. ಮನು ಮತ್ತು ರೋಹಿತ್ ಯಾದವ್ (ಜಾವೆಲಿನ್ ಥ್ರೋ), ಅವಿನಾಶ್ ಸಬ್ಳೆ (3000ಮೀ ಸ್ಟೀಪಲ್‌ಚೇಸ್), ನಿತೆಂದರ್ ರಾವತ್ (ಮ್ಯಾರಥಾನ್), ಎಂ. ಶ್ರೀಶಂಕರ್ ಮತ್ತು ಮೊಹಮ್ಮದ್ ಅನೀಸ್ ಯಾಹ್ಯಾ (ಲಾಂಗ್‌ ಜಂಪ್), ಅಬ್ದುಲ್ ಅಬೂಬಕರ್, ಪ್ರವೀಣ ಚಿತ್ರವೇಲ್ ಮತ್ತು ಎಲ್ದೋಸ್ ಪಾಲ್ (ಟ್ರಿಪಲ್ ಜಂಪ್), ತಜೀಂದರ್ ಪಾಲ್ ಸಿಂಗ್ ತೂರ್ (ಶಾಟ್‌ಪಟ್), ಸಂದೀಪ್ ಕುಮಾರ್ ಮತ್ತು ಅಮಿತ್ ಖತ್ರಿ (ರೇಸ್‌ ವಾಕಿಂಗ್), ಅಮೊಜ್ ಜೇಕಬ್, ನೊಹ್ ನಿರ್ಮಲ್ ಟಾಮ್, ಅರೊಕಿಯಾ ರಾಜೀವ್, ಮೊಹಮ್ಮದ್ ಅಜ್ಮಲ್, ನಾಗನಾಥನ್ ಪಾಂಡಿ ಮತ್ತು ರಾಜೇಶ್ ರಮೇಶ್ (4X400 ರಿಲೆ).‌

ಮಹಿಳೆಯರು: ಎಸ್‌. ಧನಲಕ್ಷ್ಮೀ (100ಮೀ ಮತ್ತು 4X100 ಮೀ ರಿಲೆ), ಜ್ಯೋತಿ ಯರಾಜಿ (100 ಮೀ ಹರ್ಡಲ್ಸ್), ಬಿ. ಐಶ್ವರ್ಯಾ (ಲಾಂಗ್‌ಜಂಪ್, ಟ್ರಿಪಲ್ ಜಂಪ್), ಯಾನ್ಸಿ ಸೊಜನ್ (ಲಾಂಗ್‌ಜಂಪ್), ಮನಪ್ರೀತ್ ಕೌರ್ (ಶಾಟ್‌ಪಟ್), ನವಜೀತ್ ಕೌರ್ ಧಿಲ್ಲೊನ್ ಮತ್ತು ಸೀಮಾ ಅಂಟಿಲ್ ಪೂನಿಯಾ (ಡಿಸ್ಕಸ್‌ ಥ್ರೋ), ಅನುರಾಣಿ ಮತ್ತು ಶಿಲ್ಪಾ ರಾಣಿ (ಜಾವೆಲಿನ್ ಥ್ರೋ), ಮಂಜು ಬಾಲಾ ಸಿಂಗ್ ಮತ್ತು ಸರಿತಾ ರೋಮಿತ್ ಸಿಂಗ್ (ಹ್ಯಾಮರ್ ಥ್ರೋ), ಭಾವನಾ ಜಾಟ್ ಮತ್ತು ಪ್ರಿಯಾಂಕಾ ಗೋಸ್ವಾಮಿ (ರೇಸ್ ವಾಕಿಂಗ್), ಹಿಮಾ ದಾಸ್, ದ್ಯುತಿ ಚಾಂದ್, ಶ್ರಬನಿ ನಂದಾ, ಎಂ.ವಿ. ಜಿಲ್ನಾ ಮತ್ತು ಎನ್.ಎಸ್. ಸಿಮಿ (4X100 ಮೀ ರಿಲೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.