ADVERTISEMENT

ಒಲಿಂಪಿಕ್ಸ್: ಉದ್ದೀಪನ ಮದ್ದು ಸೇವನೆ; ಕುಸ್ತಿಪಟು ಸುಮಿತ್ ತಾತ್ಕಾಲಿಕ ಅಮಾನತು

ಪಿಟಿಐ
Published 4 ಜೂನ್ 2021, 10:36 IST
Last Updated 4 ಜೂನ್ 2021, 10:36 IST
ಸುಮಿತ್ ಮಲಿಕ್ –ಸಾಯ್ ಮೀಡಿಯಾ ಚಿತ್ರ
ಸುಮಿತ್ ಮಲಿಕ್ –ಸಾಯ್ ಮೀಡಿಯಾ ಚಿತ್ರ   

ನವದೆಹಲಿ:ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಕುಸ್ತಿಪಟು ಸುಮಿತ್ ಮಲಿಕ್ ಅವರನ್ನು ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಟೋಕಿಯೊ ಕೂಟಕ್ಕೆ ಇನ್ನು ಕೆಲವೇ ವಾರಗಳು ಉಳಿದಿರುವಂತೆ ಭಾರತಕ್ಕೆ ಇದು ಮುಜುಗರದ ಸಂಗತಿಯಾಗಿ ಪರಿಣಮಿಸಿದೆ.

ಇತ್ತೀಚೆಗೆ ಬಲ್ಗೇರಿಯಾದಲ್ಲಿ ನಡೆದ ಅರ್ಹತಾ ಟೂರ್ನಿಯ ಸಂದರ್ಭದಲ್ಲಿ ಸುಮಿತ್ ಅವರಿಂದ ಪರೀಕ್ಷಾ ಮಾದರಿ ಸಂಗ್ರಹಿಸಲಾಗಿತ್ತು.

ಒಲಿಂಪಿಕ್ಸ್‌ಗೂ ಮೊದಲು ಭಾರತದ ಕುಸ್ತಿಪಟುವೊಬ್ಬ ಉದ್ದೀಪನ ಮದ್ದು ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಇದು ಎರಡನೇ ಬಾರಿ. 2016ರ ರಿಯೊ ಕೂಟಕ್ಕೂ ಮೊದಲು ನರಸಿಂಗ್ ಪಂಚಮ್ ಯಾದವ್‌ ಮದ್ದು ಸೇವಿಸಿದ್ದು ಸಾಬೀತಾಗಿತ್ತು. ನಾಲ್ಕು ವರ್ಷಗಳ ಕಾಲ ಅವರನ್ನು ಅಮಾನತು ಮಾಡಲಾಗಿತ್ತು.

ADVERTISEMENT

2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಸುಮಿತ್‌, ಮೇನಲ್ಲಿ ನಡೆದ ಬಲ್ಗೇರಿಯಾ ಟೂರ್ನಿಯಲ್ಲಿ 125 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಕುಸ್ತಿಪಟುಗಳಿಗೆ ಟೋಕಿಯೊ ಟಿಕೆಟ್‌ ಗಳಿಸುವ ಕೊನೆಯ ಅವಕಾಶ ಇದಾಗಿತ್ತು.

‘ಸುಮಿತ್ ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದೆ ಎಂದು ವಿಶ್ವ ಕುಸ್ತಿ ಒಕ್ಕೂಟವು (ಯುಡಬ್ಲ್ಯುಡಬ್ಲ್ಯು) ನಮ್ಮ ಫೆಡರೇಷನ್‌ಗೆ ಗುರುವಾರ ಸಂದೇಶ ಕಳುಹಿಸಿದೆ‘ ಎಂದು ಭಾರತ ಕುಸ್ತಿ ಫೆಡರೇಷನ್‌ನ(ಡಬ್ಲ್ಯುಎಫ್‌ಐ) ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ನಡೆದ ರಾಷ್ಟ್ರೀಯ ಶಿಬಿರಗಳಲ್ಲಿ ಅವರು ಮೊಣಕಾಲು ನೋವಿನಿಂದ ಬಳಲಿದ್ದರು.

‘ಸುಮಿತ್ ಅವರು ತಮ್ಮ ಅರಿವಿಗೆ ಬಾರದೆ ಏನನ್ನಾದರೂ ತೆಗೆದುಕೊಂಡಿರಬೇಕು. ಬಿ ಸ್ಯಾಂಪಲ್ ಬರುವವರೆಗೆ ಕಾಯೋಣ’ ಎಂದು ತೋಮರ್ ಹೇಳಿದ್ದರು.

ಸುಮಿತ್ ಅವರ ‘ಬಿ’ ಸ್ಯಾಂಪಲ್‌ನಲ್ಲೂ ಮದ್ದು ಸೇವನೆ ಸಾಬೀತಾದರೆ, ಕುಸ್ತಿಯಿಂದ ಅವರು ಅಮಾನತಾಗುವ ಸಾಧ್ಯತೆಯಿದೆ.

ಅಮಾನತು ನಿರ್ಧಾರವನ್ನು ಪ್ರಶ್ನಿಸುವ ಹಕ್ಕು ಅವರಿಗಿದೆ. ಆದರೆ ವಿಚಾರಣೆ ನಡೆದು ತೀರ್ಪು ಹೊರಬರುವ ಹೊತ್ತಿಗೆ ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಸಾಧ್ಯವಾಗದಿರಬಹುದು.

ಭಾರತದ ಎಂಟು ಕುಸ್ತಿಪಟುಗಳು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.