ADVERTISEMENT

ಬ್ರಿಜ್‌ಭೂಷಣ್ ಆಪ್ತ WFI ಅಧ್ಯಕ್ಷ; ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್

ಪಿಟಿಐ
Published 21 ಡಿಸೆಂಬರ್ 2023, 12:42 IST
Last Updated 21 ಡಿಸೆಂಬರ್ 2023, 12:42 IST
<div class="paragraphs"><p>ಪತ್ರಕರ್ತರೆದುರು ಕಣ್ಣೀರು ಹಾಕಿದ ಸಾಕ್ಷಿ ಮಲಿಕ್</p></div>

ಪತ್ರಕರ್ತರೆದುರು ಕಣ್ಣೀರು ಹಾಕಿದ ಸಾಕ್ಷಿ ಮಲಿಕ್

   

ಪಿಟಿಐ ಚಿತ್ರ

ನವದೆಹಲಿ: ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ ಕುಸ್ತಿ ಕ್ರೀಡೆಗೆ ಕಣ್ಣೀರ ವಿದಾಯ ಘೋಷಿಸಿದರು.

ADVERTISEMENT

ಭಾರತ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಗುರುವಾರ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಹಾಗೂ
ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಕುಮಾರ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ವಿರೋಧಿಸಿದ ಸಾಕ್ಷಿ ಈ ನಿರ್ಧಾರ ಪ್ರಕಟಿಸಿದರು. ಪತ್ರಿಕಾಗೋಷ್ಠಿ ನಡೆದಿರುವಾಗಲೇ ತಮ್ಮ ಕುಸ್ತಿ ಬೂಟುಗಳನ್ನು ಎತ್ತಿ ಮೇಜಿನ ಮೇಲಿಟ್ಟರು. 

ಈ ಸಂದರ್ಭದಲ್ಲಿ ಅವರೊಂದಿಗೆ ಒಲಿಂಪಿಕ್ಸ್‌ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಏಷ್ಯನ್ ಗೇಮ್ಸ್ ಪದಕ ಜಯಿಸಿರುವ ವಿನೇಶಾ ಫೋಗಟ್ ಕೂಡ ಹತಾಶರಾಗಿ ಕುಳಿತಿದ್ದರು.

ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಕಳೆದ ಜನವರಿಯಲ್ಲಿ ಆರಂಭವಾಗಿದ್ದ ಪ್ರತಿಭಟನೆಯಲ್ಲಿ ಈ ಮೂವರೂ ಮುಂಚೂಣಿಯಲ್ಲಿದ್ದರು.

ದೀರ್ಘ ಅವಧಿಯವರೆಗೆ ನಡೆದ ಈ ಧರಣಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದೀಗ ಈ ಪ್ರಕರಣವು ನ್ಯಾಯಾಲಯದಲ್ಲಿದೆ. 

‘ಫೆಡರೇಷನ್‌ಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಬೇಕು ಎಂದು ಬಯಸಿದ್ದೆವು. ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯಿದ್ದರೆ ಶೋಷಣೆಗಳಿಗೆ ಕಡಿವಾಣ ಹಾಕಲು ಸಾಧ್ಯ ವಿತ್ತು. ಆದರೆ ಈಗ ಚುನಾಯಿತಗೊಂಡಿರುವ ಸಮಿತಿಯಲ್ಲಿ ಒಬ್ಬ ಮಹಿಳೆಯೂ ಇಲ್ಲ’ ಎಂದು ಸಾಕ್ಷಿ ಬೇಸರ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ವಿನೇಶಾ ಫೋಗಟ್, ‘ಸಂಜಯ್ ಸಿಂಗ್ ಅವರಂತಹವರು ಅಧ್ಯಕ್ಷರಾಗಿರುವುದು ದುಃಖಕರ ಸಂಗತಿ. ಇದರಿಂದಾಗಿ ಕುಸ್ತಿಗೆ ಬರುವ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಶೋಷಣೆ ಅನುಭವಿ ಸುವುದು ಖಚಿತ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಘಟನೆಗಳು ಇನ್ನು ಮುಂದೆ ರಾಜಾರೋಷವಾಗಿ ನಡೆಯಲಿವೆ. ಈ ದೇಶದಲ್ಲಿ ನ್ಯಾಯ ಪಡೆಯುವುದು ಹೇಗೆಂದು ನನಗೆ ಗೊತ್ತಾಗುತ್ತಿಲ್ಲ. ದೇಶದ ಕುಸ್ತಿಯ ಭವಿಷ್ಯ ಕರಾಳವಾಗಿದೆ’ ಎಂದರು.

 ‘ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಬ್ರಿಜ್‌ಭೂಷಣ್ ಆಪ್ತರು, ಸಂಬಂಧಿಕರು ಸ್ಪರ್ಧಿಸಲು ಬಿಡುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ತನ್ನ ಮಾತು ಉಳಿಸಿ ಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಬಜರಂಗ್ ಪೂನಿಯಾ ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸತ್ಯ ಮತ್ತು ಗೌರವಕ್ಕಾಗಿ ಹೋರಾಡುತ್ತಿದ್ದೆವು. ಇದು ದೀರ್ಘಕಾಲದ ಯುದ್ಧವಾಗಿದೆ. ಮುಂದಿನ ಒಂದು ಅಥವಾ ಎರಡು ತಲೆಮಾರುಗಳು ನ್ಯಾಯ ಪಡೆಯಲು ಹೋರಾಟ ಮುಂದುವರಿಸಬೇಕಾಗಬಹುದು‘ ಎಂದರು.

ಸಂಜಯ್ ಸಿಂಗ್ ಅಧ್ಯಕ್ಷ

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್‌ ಕುಮಾರ್‌ ಸಿಂಗ್‌ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಜ್‌ ಭೂಷಣ್‌ ಮತ್ತೆ ಫೆಡರೇಷನ್‌ ಮೇಲೆ ಹಿಡಿತ ಸಾಧಿಸಿದಂತಾಗಿದೆ.

ಗುರುವಾರ ನಡೆದ ಮತದಾನದಲ್ಲಿ ಉತ್ತರಪ್ರದೇಶ ಕುಸ್ತಿ ಸಂಸ್ಥೆಯ
ಉಪಾಧ್ಯಕ್ಷರಾಗಿರುವ ಸಂಜಯ್‌ ಸಿಂಗ್‌ 40 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿಯಾಗಿದ್ದ, 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕುಸ್ತಿಪಟು ಅನಿತಾ ಶೆರಾನ್ 7 ಮತಗಳನ್ನು ಪಡೆದು ಪರಾಭವಗೊಂಡರು.‌ ಆದರೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅನಿತಾ ಬಣದಿಂದ ಸ್ಪರ್ಧಿಸಿದ್ದ ಪ್ರೇಮ
ಚಂದ್ ಲೋಚಬ್‌ ಜಯ ಸಾಧಿಸಿದ್ದಾರೆ. ಅವರು ಬ್ರಿಜ್‌ ಭೂಷಣ್‌ ಬಣದವರಾದ ಚಂಡೀಗಢ ಕುಸ್ತಿ ಸಂಸ್ಥೆಯ ದರ್ಶನ್‌ ಲಾಲ್ ಅವರನ್ನು ಮಣಿಸಿದರು.

ಬ್ರಿಜ್ ಭೂಷಣ್ ಅವರ ಆಪ್ತ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ, ನಾನು ಕುಸ್ತಿ ತ್ಯಜಿಸುತ್ತೇನೆ. ಇಂದಿನಿಂದ ನೀವು ನನ್ನನ್ನು ಕುಸ್ತಿ ಕಣದಲ್ಲಿ ನೋಡುವುದಿಲ್ಲ.
-ಸಾಕ್ಷಿ ಮಲಿಕ್‌, (ಪತ್ರಿಕಾಗೋಷ್ಠಿಯಲ್ಲಿ ಗಳಗಳನೇ ಅಳುತ್ತಾ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.