ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಉಳಿದುಕೊಂಡಿರುವ ಅಥ್ಲೀಟುಗಳಿಗೆ ಕಳವಿನ ಬಿಸಿತಟ್ಟಿದೆ. ವರದಿಯಾದ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ.
ನಗರದ ಉತ್ತರಭಾಗದಲ್ಲಿರುವ ಕ್ರೀಡಾಗ್ರಾಮದಲ್ಲಿದ್ದ ಜಪಾನ್‌ನ ರಗ್ಬಿ ಸೆವೆನ್ ಆಟಗಾರನೊಬ್ಬನ ಕೊಠಡಿಯಿಂದ ಮದುವೆ ಉಂಗುರ, ಸರ ಮತ್ತು ನಗದು ಕಳವು ಮಾಡಲಾಗಿದೆ ಎಂದು ಕ್ಯೊಡೊ ನ್ಯೂಸ್ ಏಜನ್ಸಿ ಸೋಮವಾರ ವರದಿ ಮಾಡಿತ್ತು.
ಜುಲೈ 24ರಂದು ಮೊದಲ ಫುಟ್‌ಬಾಲ್ ಪಂದ್ಯ ಆಡುವ ಹಿಂದಿನ ದಿನ ತಮ್ಮ ಕೆಲವು ಆಟಗಾರರ ವಸ್ತುಗಳನ್ನು ದೋಚಲಾಗಿತ್ತು ಎಂದು ಅರ್ಜೆಂಟೀನಾ ಫುಟ್‌ಬಾಲ್ ತಂಡದ ಹೆಡ್ ಕೋಚ್ ಜೇವಿಯರ್ ಮಸ್ಕರೇನೊ ದೂರಿದ್ದರು.
‘ಈ ಪ್ರಕರಣಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಪ್ಯಾರಿಸ್ 2024 ವಕ್ತಾರ ಆ್ಯನ್ ಡೆಷಾಂಪ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಾವು ಅಥ್ಲೀಟುಗಳ, ವಿದೇಶಿ ನಿಯೋಗಗಳ ಪರ ನಿಲ್ಲುತ್ತೇವೆ. ಕ್ರೀಡಾ ಗ್ರಾಮ ಸುರಕ್ಷಿತ ಸ್ಥಳವಾಗಿದೆ. 180 ಸೆಕ್ಯುರಿಟಿ ಕ್ಯಾಮೆರಾಗಳಿವೆ ಎಂದರು. ಆದರೆ ಎಷ್ಟು ಮಂದಿ ಭದ್ರತಾ ಸಿಬ್ಬಂದಿ ಇದ್ದಾರೆ ಎಂದು ತಕ್ಷಣಕ್ಕೆ ತಿಳಿಸಲಿಲ್ಲ. 128.5 ಎಕರೆ (52 ಹೆಕ್ಟೇರ್) ಪ್ರದೇಶದಲ್ಲಿರುವ ಕ್ರೀಡಾ ಗ್ರಾಮದಲ್ಲಿ 14,000 ಮಂದಿ ಇಳಿದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.