ADVERTISEMENT

ಕ್ರೀಡಾ ಆಡಳಿತ ಮಸೂದೆ: ಭಾರತ ಕ್ರೀಡಾಕ್ಷೇತ್ರದಲ್ಲಿ ಮೂಡಿದ ಹೊಸ ಭರವಸೆ

ಸಂಸತ್‌ನಲ್ಲಿ ಕ್ರೀಡಾ ಆಡಳಿತ ಮಸೂದೆಗೆ ಅಂಗೀಕಾರ; ರಾಷ್ಟ್ರಪತಿ ಅಂಕಿತವಷ್ಟೇ ಬಾಕಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 16:07 IST
Last Updated 12 ಆಗಸ್ಟ್ 2025, 16:07 IST
ಮನ್ಸುಖ್ ಮಾಂಡವೀಯ
ಮನ್ಸುಖ್ ಮಾಂಡವೀಯ   

ನವದೆಹಲಿ (ಪಿಟಿಐ): ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯು ಮಂಗಳವಾರ ಸಂಸತ್‌ನಲ್ಲಿ ಅಂಗೀಕೃತವಾಯಿತು. 

ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಿ 24 ಗಂಟೆ ಕಳೆಯುವಷ್ಟರಲ್ಲಿಯೇ ರಾಜ್ಯಸಭೆಯಲ್ಲಿ ಬಹಳಷ್ಟು ಚರ್ಚೆಯ ನಂತರ ಅಂಗೀಕೃತಗೊಂಡಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ (ತಿದ್ದುಪಡಿ) ಮಸೂದೆಯೂ ಸಂಸತ್‌ನಲ್ಲಿ ಅಂಗೀಕಾರಗೊಂಡಿತು. ಇದೀಗ ಈ ಎರಡೂ ಮಸೂದೆಗಳಿಗೂ ರಾಷ್ಟ್ರಪತಿಗಳ ಅಧಿಕೃತ ಮುದ್ರೆ ಬೀಳಬೇಕಿದೆ. ಅದರ ನಂತರ ಈ ಮಸೂದೆಗಳು ಕಾನೂನು ರೂಪ ಪಡೆಯಲಿವೆ. 

ಸಂಸತ್‌ನ ಮೇಲ್ಮನೆಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ  ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಮಸೂದೆಗಳನ್ನು ಮಂಡಿಸಿದರು. 

ADVERTISEMENT

ಆದರೆ ಇದೇ ಹೊತ್ತಿನಲ್ಲಿ ಬಿಹಾರದಲ್ಲಿ ಚುನಾವಣೆ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ಸಮಗ್ರ ತನಿಖೆಗೆ  ಆಗ್ರಹಿಸಿದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ವಿಪಕ್ಷ ನಾಯಕ  ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತಿತರ ನಾಯಕರು ಸಭಾತ್ಯಾಗ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡುವ ಅವಕಾಶ ಪಡೆದ ಸಚಿವ ಮಾಂಡವೀಯ, ‘20 ದೇಶಗಳಲ್ಲಿ ಕ್ರೀಡಾ ಕಾನೂನು ಜಾರಿಯಲ್ಲಿದೆ. ನಾವು ಈ ಕಾನೂನು ಜಾರಿಗೆ ತಂದ 21ನೇ ದೇಶವಾಗುವಂತೆ ಮಾಡುವುದು ರಾಜ್ಯಸಭೆಯ ಕೈಯಲ್ಲಿದೆ’ ಎಂದರು. ಇದರೊಂದಿಗೆ ಸದಸ್ಯರ ನಡುವೆ ಚ್‌ಚೆ ಆರಂಭವಾದವು. 

ಚರ್ಚೆಯಲ್ಲಿ ಭಾಗವಹಿಸಿದ್ದ ಜಿಜೆಡಿ ಸಂಸದ ಶುಭಾಶಿಶ್ ಖುಂಟಿಯ, ‘ಕ್ರೀಡಾ ಆಡಳಿತವನ್ನು ಕೇಂದ್ರಿಕೃತಗೊಳಿಸುವುದು ಅಪಾಯಕಾರಿ. ಈ ಮಸೂದೆಯಲ್ಲಿ ಜಿಲ್ಲೆ ಮತ್ತು ಬ್ಲಾಕ್ ಮಟ್ಟದ ಅಥ್ಲೀಟ್‌ಗಳ ಅಭಿವೃದ್ಧಿಯ ಕುರಿತು ಯಾವುದೇ ಸ್ಪಷ್ಟತೆ ಇಲ್ಲ’ ಎಂದರು. 

'ಮಸೂದೆಯು ಸಶಕ್ತಗೊಳಿಸುವಂತಿರಬೇಕು. ನಿಯಂತ್ರಣ ಮಾಡುವಂತಿರಬಾರದು’ ಎಂದೂ ಅವರು ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಂಡವೀಯ, ‘ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ತರಲು ಈ ಮಸೂದೆಯಿಂದ ಸಾಧ್ಯವಾಗಲಿದೆ. ಸರ್ಕಾರವು ಯಾವುದೇ ನಿಯಂತ್ರಣ ಅಥವಾ ಹಸ್ತಕ್ಷೇಪ ಮಾಡುತ್ತಿಲ್ಲ. ಸರ್ಕಾರವು ಬೆಂಬಲ ನೀಡುವ ಕೆಲಸ ಮಾಡಲಿದೆ. ಮತ್ತು ಸೌಲಭ್ಯಗಳನ್ನೂ ನೀಡಲಿದ್ದೇವೆ’ ಎಂದರು. 

ಎನ್‌ಸಿಪಿ ನಾಯಕ ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ಪಿ.ಟಿ. ಉಷಾ ಅವರು ಮಸೂದೆಯ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.

‘ದೀರ್ಘ ಕಾಲದಿಂದ ಕಾದಿದ್ದ ಮಸೂದೆ ಇದಾಗಿತ್ತು. ಇದು ಈಗಿನ ಅಗತ್ಯವೂ ಆಗಿತ್ತು. ನಮ್ಮಲ್ಲಿ ಈಗಾಗಲೇ ಇದ್ದ ಕ್ರೀಡಾ ನೀತಿಯು ಜಾಳಾಗಿತ್ತು. ಕಾನೂನು ಚೌಕಟ್ಟು ಬಿಗಿಯಾಗಿರಲಿಲ್ಲ. ಆದ್ದರಿಂದ ಈಗ ಅಂಗೀಕಾರವಾಗಿರುವ ಮಸೂದೆ ಮಹತ್ವದ್ದಾಗಿದೆ. 2036 ಒಲಿಂಪಿಕ್ ಕೂಟದ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸಿದ್ದೇವೆ. ನಮಗೆ ಲಭಿಸುವ ಆಶಾಭಾವನೆಯೂ ಇದೆ. ಈ ಸಂದರ್ಭದಲ್ಲಿ ಮಸೂದೆ ಅಂಗೀಕಾರವಾಗಿರುವುದು ಪೂರಕವಾಗಿದೆ’ ಎಂದು ಪಟೇಲ್ ಹೇಳಿದರು. 

‘ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಲಿಂಗ ಸಮಾನತೆ ತರಲು ಈ ಮಸೂದೆ ಸಹಕಾರಿಯಾಗಿದೆ. ಅಥ್ಲೀಟ್‌ಗಳನ್ನು ಸಬಲಗೊಳಿಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೂಡ ನೆರವಾಗಲಿದೆ. ಇದು ನ್ಯಾಯೋಚಿತ ಆಟವೇ ಮುಖ್ಯವಾಗಿದೆ’ ಎಂದು ಪಿ.ಟಿ. ಉಷಾ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಂಡವೀಯ, ‘ಸ್ವಾತಂತ್ರ್ಯ ನಂತರ ದೇಶದ ಕ್ರೀಡಾಕ್ಷೇತ್ರದಲ್ಲಿ ಆದ ಏಕೈಕ ಅತಿದೊಡ್ಡ ಸುಧಾರಣೆ ಹೆಜ್ಜೆ ಇದಾಗಿದೆ’ ಎಂದು ಬಣ್ಣಿಸಿದರು.

ಮಸೂದೆಗೆ ಫೆಡರೇಷನ್‌ಗಳಿಂದ ಸ್ವಾಗತ

ಕ್ರೀಡಾ ಆಡಳಿತ ಮಸೂದೆಯು ಸಂಸತ್‌ನಲ್ಲಿ ಅಂಗೀಕೃತಗೊಳ್ಳುವ ಮೂಲಕ ಅಮೆರಿಕ ಇಂಗ್ಲೆಂಡ್ ಚೀನಾ ಮತ್ತು ಜಪಾನ್ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಇದನ್ನು ದೇಶದ ಹಲವು ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌)ಗಳು ಸ್ವಾಗತಿಸಿವೆ.  ‘ಇದೊಂದು ಒಳ್ಳೆಯ ಬೆಳವಣಿಗೆ. ಎಲ್ಲ ಕಾರ್ಯಗಳನ್ನೂ ನೇರಾನೇರಗೊಳಿಸುತ್ತವೆ. ಅಸ್ಪಷ್ಟತೆಗೆ ಯಾವುದೇ ಅವಕಾಶವಿಲ್ಲ.

ಎಲ್ಲರೂ ಏಕರೂಪದ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಲೇಬೇಕು. ಬೇರೆ ಬೇರೆ ವ್ಯಕ್ತಿಗಳಿಗೆ ಪ್ರತ್ಯೇಕತೆ ಇಲ್ಲ. ಮೊದಲಿದ್ದ ಧೋರಣೆ ಈಗ ನಡೆಯುವುದಿಲ್ಲ’ ಎಂದು ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ಹಂಗಾಮಿ ಕಾರ್ಯದರ್ಶಿ ಸುಂದರ್ ಅಯ್ಯರ್ ಹೇಳಿದ್ದಾರೆ.  ರಾಜ್ಯಸಭಾ ಸದಸ್ಯೆಯೂ ಆಗಿರುವ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಅವರು ‘ಈ ದಿನವು ದೇಶ ಮತ್ತು ವೈಯಕ್ತಿಕವಾಗಿ ಮಹತ್ವದ್ದಾಗಿದೆ. ಈ ಕ್ಷಣಕ್ಕಾಗಿ ದೀರ್ಘ ಕಾಲದಿಂದ ಕಾಯುತ್ತಿದ್ದೆ’ ಎಂದಿದ್ದಾರೆ. 

‘ಇದೊಂದು ಉತ್ತಮವಾದ ಮಸೂದೆಯಾಗಿದೆ. 2036 ಒಲಿಂಪಿಕ್ಸ್‌  ಆತಿಥ್ಯ ಗಳಿಸುವ ಹಿನ್ನೆಲೆಯಲ್ಲಿ ಪ್ರಧಾನಿಗಳ ದೂರದರ್ಶಿತ್ವ ಇರುವ ಮಸೂದೆ ಇದಾಗಿದೆ. ಕ್ರೀಡಾ ಫೆಡರೇಷನ್‌ಗಳಲ್ಲಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲಿದ್ದು ಕ್ರೀಡೆಯು ಉತ್ತಮವಾಗಿ ಬೆಳೆಯಲು ಅವಕಾಶವಾಗಲಿದೆ’ ಎಂದು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ಅಧ್ಯಕ್ಷ ಸಹದೇವ್ ಯಾದವ್ ಹೇಳಿದ್ದಾರೆ.  ‘ಪ್ರಸ್ತುತ ಕಾಲಘಟ್ಟದ ಅಗತ್ಯವಾಗಿದೆ ಈ ಮಸೂದೆ’ ಎಂದು ಅಥ್ಲೆಟಿಕ್ಸ್ ಫೆಡರೇಷನ್ ವಕ್ತಾರ ಅದಿಲೆ ಸುಮರಿವಾಲಾ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.