ADVERTISEMENT

ಬೆಂಗಳೂರಿನ 'ಚಿನ್ನದ ಮೀನು' ಧಿನಿಧಿಗೆ ಪಿಎಂ ರಾಷ್ಟ್ರೀಯ ಬಾಲ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 14:28 IST
Last Updated 26 ಡಿಸೆಂಬರ್ 2025, 14:28 IST
   

ಬೆಂಗಳೂರು: ಕರ್ನಾಟಕದ ‘ಚಿನ್ನದ ಮೀನು’ ಧಿನಿಧಿ ದೇಸಿಂಗು ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ‌ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಸ್ವೀಕರಿಸಿದರು.

ಕ್ರೀಡೆ, ಶೌರ್ಯ, ಸಾಮಾಜಿಕ ಸೇವೆ ಮತ್ತು ಪರಿಸರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಾಗಿ ನೀಡಲಾಗುವ ಈ ಪ್ರಶಸ್ತಿಗೆ 14 ವರ್ಷದ ಬ್ಯಾಟರ್‌ ವೈಭವ್ ಸೂರ್ಯವಂಶಿ, ಏಳು ವರ್ಷದ ಚೆಸ್‌ಪಟು ವಾಕಾ ಲಕ್ಷ್ಮಿ ಸೇರಿದಂತೆ 20 ಮಂದಿ ಭಾಜನರಾಗಿದ್ದಾರೆ.

ಬೆಂಗಳೂರಿನ 15 ವರ್ಷದ ಧಿನಿಧಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಒಲಿಂಪಿಕ್ಸ್‌ನ ಭಾರತದ ತುಕಡಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು ಎಂದ ಹಿರಿಮೆಗೂ ಪಾತ್ರವಾಗಿದ್ದರು.

ADVERTISEMENT

200 ಮೀಟರ್ ಫ್ರೀಸ್ಟೈಲ್‌ನಲ್ಲಿ ಪರಿಣತಿ ಹೊಂದಿರುವ ಧಿನಿಧಿ, 100 ಮೀಟರ್ ಫ್ರೀಸ್ಟೈಲ್ ಮತ್ತು 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲೂ ಸ್ಪರ್ಧಿಸುತ್ತಾರೆ. 2022ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು ಅವರಾಗಿದ್ದರು.

ಸಿ.ವಿ.ರಾಮನ್‌ ನಗರದ ಡಿಆರ್‌ಡಿಎ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ಧಿನಿಧಿ 2018ರಲ್ಲಿ ಪೋಷಕರ ಬೆಂಬಲ ಹಾಗೂ ಮಾರ್ಗದರ್ಶನದಿಂದ ಈಜು ತರಬೇತಿಗೆ ಸೇರಿದ್ದರು. ಕ್ರಮೇಣ ಪರಿಣತಿ ಪಡೆದು, ಸ್ಪರ್ಧಾತ್ಮಕ ಈಜಿನಲ್ಲಿ ತೊಡಗಿಸಿಕೊಂಡರು. ಅವರು ಡಾಲ್ಫಿನ್ ಅಕ್ವಾಟಿಕ್ಸ್‌ನ ಬಿ.ಎಂ. ಮಧು ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಧಿನಿಧಿ ದೇಸಿಂಗು

2023ರಲ್ಲಿ 100 ಮೀ ಫ್ರೀಸ್ಟೈಲ್‌ನಲ್ಲಿ ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. 200 ಮೀ ಫ್ರೀಸ್ಟೈಲ್ ಮತ್ತು 200 ಮೀ ವೈಯಕ್ತಿಕ ಮೆಡ್ಲೆಯಲ್ಲೂ ದಾಖಲೆ ನಿರ್ಮಿಸಿದ್ದರು.

ಗೋವಾದಲ್ಲಿ ನಡೆದ (2023) ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದಿದ್ದಾರೆ. ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಯೂ ಭಾಗವಹಿಸಿದ್ದರು. ಒಡಿಶಾದಲ್ಲಿ ಈ ವರ್ಷ ನಡೆದ 78ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲೂ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.