ADVERTISEMENT

ಎಲ್ವಿರಾ ಬ್ರಿಟ್ಟೊಗೆ ಅಂಚೆ ಇಲಾಖೆ ಗೌರವ: ವಿಶೇಷ ಪೋಸ್ಟಲ್ ಕವರ್ ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 19:30 IST
Last Updated 26 ಆಗಸ್ಟ್ 2022, 19:30 IST
ಎಲ್ವಿರಾ ಬ್ರಿಟ್ಟೊ
ಎಲ್ವಿರಾ ಬ್ರಿಟ್ಟೊ   

ಮಂಗಳೂರು: ಅರುವತ್ತರ ದಶಕದ ಮಹಿಳಾ ಹಾಕಿಯ ಚಾಂಪಿಯನ್ ಆಟಗಾರ್ತಿ ಮತ್ತು ಆಡಳಿತಗಾರ್ತಿ ಎಲ್ವಿರಾ ಬ್ರಿಟ್ಟೊ ಅವರಿಗೆ ಭಾರತೀಯ ಅಂಚೆ ಇಲಾಖೆ ಗೌರವ ಸಲ್ಲಿಸಿದೆ. ಅವರ ಹೆಸರಿನಲ್ಲಿ ಸಿದ್ಧಗೊಂಡಿರುವ ವಿಶೇಷ ಪೋಸ್ಟಲ್ ಕವರ್ ಇದೇ 29ರಂದು, ಕ್ರೀಡಾ ದಿನಾಚರಣೆಯಲ್ಲಿ ಬಿಡುಗಡೆಯಾಗಲಿದೆ.

ಬೆಂಗಳೂರು ಜಿಪಿಒದ ಮೇಘದೂತ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಪಿ.ಗಣೇಶ್ ಅವರು ಕವರ್ ಬಿಡುಗಡೆ ಮಾಡುವರು. ಎಲ್ವಿರಾ ಅವರ ಸಹೋದರಿಯರೂ ಭಾರತ ಮಹಿಳಾ ಹಾಕಿ ತಂಡದ ಮಾಜಿ ಆಟಗಾರ್ತಿಯರೂ ಆದ ಮೇ ಬ್ರಿಟ್ಟೊ ಮತ್ತು ರೀಟಾ ಬ್ರಿಟ್ಟೊ ಪಾಲ್ಗೊಳ್ಳುವರು.

ಭಾರತ ತಂಡದಲ್ಲಿ ಆಡಿದ್ದ ಎಲ್ವಿರಾ, ಮೇ ಮತ್ತು ರೀಟಾ ‘ಬ್ರಿಟ್ಟೊ ಸಹೋದರಿಯರು’ ಎಂದೇ ಹಾಕಿ ಲೋಕದಲ್ಲಿ ಚಿರಪರಿಚಿತರಾಗಿದ್ದರು. ಎಲ್ವಿರಾ ಅವರು 81ನೇ ವಯಸ್ಸಿನಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ಅನಾರೋಗ್ಯದಿಂದ ಮೃತರಾಗಿದ್ದರು.

ADVERTISEMENT

1960ರಲ್ಲಿ ಜಪಾನ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ಆಡಿದ್ದ ಭಾರತ ಮಹಿಳಾ ಹಾಕಿ ತಂಡವನ್ನು ಎಲ್ವಿರಾ ಮುನ್ನಡೆಸಿದ್ದರು. ಆಗಿನ ಮೈಸೂರು ರಾಜ್ಯ ತಂಡವು 1960ರಿಂದ 67ರ ಅವಧಿಯಲ್ಲಿ 8 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಲು ಎಲ್ವಿರಾ ಆಟ ಪ್ರಮುಖ ಕಾರಣವಾಗಿತ್ತು.

ಕಣದಿಂದ ನಿವೃತ್ತರಾದ ನಂತರವೂ ಅವರು ಹಾಕಿಯ ನಂಟು ಉಳಿಸಿಕೊಂಡಿದ್ದರು. ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಸ್ಥೆಗೆ ಎಂಟು ವರ್ಷ ಅಧ್ಯಕ್ಷೆಯಾಗಿದ್ದರು. ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ 12 ವರ್ಷ ಸರ್ಕಾರದ ನಾಮನಿರ್ದೇಶಿತ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು.

ಆಂಗ್ಲೊ ಇಂಡಿಯನ್ ಕುಟುಂಬದ ಎಲ್ವಿರಾ ಬಾಲ್ಯದಲ್ಲಿ ಹಾಕಿ, ಕ್ರಿಕೆಟ್ ಮತ್ತು ಫುಟ್‌ಬಾಲ್ ಆಡುತ್ತಿದ್ದರು. ಕೊನೆಗೆ ಹಾಕಿ ಕ್ರೀಡೆಯಲ್ಲಿ ಉಳಿದುಕೊಂಡಿದ್ದರು. 1970ರವರೆಗೂ ಅವರು ಹಾಕಿಯಲ್ಲಿ ಛಾಪು ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.