ADVERTISEMENT

ಪ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿ: ಅಬ್ದುಸತ್ತಾರೋವ್ ವಿರುದ್ಧ ಗೆದ್ದ ಪ್ರಜ್ಞಾನಂದ

ಪಿಟಿಐ
Published 5 ಮಾರ್ಚ್ 2024, 15:24 IST
Last Updated 5 ಮಾರ್ಚ್ 2024, 15:24 IST
<div class="paragraphs"><p>ಪ್ರಜ್ಞಾನಂದ</p></div>

ಪ್ರಜ್ಞಾನಂದ

   

ಪ್ರಾಗ್‌: ಹಿಂದಿನ ದಿನದವರೆಗೆ ಅಗ್ರಸ್ಥಾನದಲ್ಲಿದ್ದ ನಾದಿರ್ಬೆಕ್ ಅಬ್ದುಸತ್ತಾರೊವ್ (ಉಜ್ಬೇಕಿಸ್ತಾನ) ಅವರನ್ನು ಸೋಲಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್‌. ಪ್ರಜ್ಞಾನಂದ, ಪ್ರಾಗ್‌ ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ಮಂಗಳವಾರ ಆರನೇ ಸುತ್ತಿನ ನಂತರ ಜಂಟಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಕಪ್ಪು ಕಾಯಿಗಳಲ್ಲಿ ಗಳಿಸಿದ ಈ ಗೆಲುವಿನಿಂದ ಪ್ರಜ್ಞಾನಂದ ಅಗ್ರಸ್ಥಾನದ ಸನಿಹದಲ್ಲಿದ್ದಾರೆ. ಹತ್ತು ಆಟಗಾರರ ರೌಂಡ್‌ರಾಬಿನ್ ಲೀಗ್‌ನಲ್ಲಿ ಇನ್ನೂ ಮೂರು ಸುತ್ತುಗಳು ಉಳಿದಿವೆ.

ADVERTISEMENT

ಎರಡನೇ ಸ್ಥಾನದಲ್ಲಿದ್ದ ಪರ್ಹಾಮ್ ಮಘಸೂಡ್ಲು ಅವರು ಆರನೇ ಸುತ್ತಿನಲ್ಲಿ ಝೆಕ್‌ ರಿಪಬ್ಲಿಕ್‌ನ ಎನ್ಗುಯೆನ್ ಥಾಯ್ ದೈವಾನ್ ಅವರಿಗೆ ಸೋತಿದ್ದೂ ಪ್ರಜ್ಞಾನಂದ ಅವರಿಗೆ ಪರೋಕ್ಷವಾಗಿ ನೆರವಾಗಿದೆ.

ಅಬ್ದುಸತ್ತಾರೋವ್ ಅವರು ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದು ಅಗ್ರಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ, ರಿಚಾರ್ಡ್ ರ್‍ಯಾಪೋರ್ಟ್ (ರುಮೇನಿಯಾ) ಮತ್ತು ಇರಾನ್‌ನ ಮಘಸೂಡ್ಲು ತಲಾ 3.5 ಪಾಯಿಂಟ್ಸ್ ಶೇಖರಿಸಿದ್ದು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್ ಅವರು ತಳದಲ್ಲಿರುವ ಪೋಲೆಂಡ್‌ನ ಮಾಥ್ಯೂಸ್ ಬಾರ್ಟೆಲ್ (2) ಅವರಿಗೆ ಶರಣಾದರು. ಬಿಳಿಕಾಯಿಗಳಲ್ಲಿ ಆಡುವ ಅವಕಾಶ ಪಡೆದ ಗುಕೇಶ್ ಗೆಲ್ಲುವರೆಂಬ ನಿರೀಕ್ಷೆ ಹುಸಿಯಾಯಿತು. ವಿದಿತ್ ಗುಜರಾತಿ (2) ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್‌ ಕೀಮರ್‌ (3) ಅವರೆದುರು ಸೋಲನುಭವಿಸಿದರು.

ಝೆಕ್ ರಿಪಬ್ಲಿಕ್‌ನ ಡೇವಿಡ್‌ ನವಾರ (3) ಮತ್ತು ರುಮೇನಿಯಾದ ರ್‍ಯಾಪೋರ್ಟ್‌ (3.5) ತಮ್ಮ ನಡುವಣ ಪಂದ್ಯ ‘ಡ್ರಾ’ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.