ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಪ್ರಶಸ್ತಿ ಗೆದ್ದ ಹರಿಯಾಣ ಸ್ಟೀಲರ್ಸ್ ತಂಡ
ಪುಣೆ: ಶಿವಂ ಪತಾರೆ ಅವರ ಅಮೋಘ ರೇಡಿಂಗ್ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಫೈನಲ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು 32–23ರಿಂದ ಮಣಿಸಿ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ದ ಸ್ಟೀಲರ್ಸ್ ತಂಡವು ಇಲ್ಲಿನ ಬಾಲೇವಾಡಿ ಶ್ರೀಶಿವ ಛತ್ರಪತಿ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಹಿಡಿತ ಸಾಧಿಸಿತು. ಎದುರಾಳಿ ತಂಡವನ್ನು ಒಂದು ಬಾರಿ ಆಲೌಟ್ ಮಾಡಿದ ಹರಿಯಾಣ ಆಟಗಾರರು ಪಂದ್ಯದುದ್ದಕ್ಕೂ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ.
ವಿರಾಮದ ವೇಳೆಗೆ 3 (15–12) ಅಂಕ ಮುನ್ನಡೆ ಗಳಿಸಿದ್ದ ಸ್ಟೀಲರ್ಸ್ ತಂಡ, ಉತ್ತರಾರ್ಧದಲ್ಲಿ ಡಿಫೆಂಡಿಂಗ್‌ನಲ್ಲಿ ಚುರುಕಿನ ಆಟವಾಡಿ ಅಂತರವನ್ನು ಮತ್ತಷ್ಟು ಹಿಗ್ಗಿಸಿಕೊಂಡಿತು.
ಇರಾನ್‌ನ ಮಹಮ್ಮದ್ ರೇಜಾ ಶಾಡ್ಲೊಯಿ (7) ಡಿಫೆಂಡಿಂಗ್‌ನಲ್ಲಿ ಮಿಂಚಿದರು. 9 ಅಂಕ ಗಳಿಸಿದ ಶಿವ ಅವರಿಗೆ ವಿನಯ್ (6) ರೇಡಿಂಗ್‌ನಲ್ಲಿ ಸಾಥ್ ನೀಡಿದರು. ಪಟ್ನಾ ಪರ ಡಿಫೆಂಡರ್ ಗುರುದೀಪ್ (6) ಮತ್ತು ರೇಡರ್ ದೇವಾಂಕ್ (5) ಹೋರಾಟ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ. ಈ ಋತುವಿನ ಯಶಸ್ವಿ ರೇಡರ್ ಎನಿಸಿರುವ ದೇವಾಂಕ್ 25 ಪಂದ್ಯಗಳಲ್ಲಿ 301 ಪಾಯಿಂಟ್ಸ್ ಗಳಿಸಿದರು.
ಕಳೆದ ಬಾರಿಯ ಫೈನಲ್‌ನಲ್ಲಿ 25–28ರಿಂದ ಪುಣೇರಿ ಪಲ್ಟನ್ ತಂಡಕ್ಕೆ ಮಣಿದು ರನ್ನರ್ಸ್ ಅಪ್ ಆಗಿದ್ದ ಸ್ಟೀಲರ್ಸ್ ತಂಡವು ಈ ಬಾರಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತು.
ಗುಂಪು ಹಂತದಲ್ಲಿ 22 ಪಂದ್ಯಗಳ ಪೈಕಿ 16 ರಲ್ಲಿ ಗೆದ್ದು (84 ಅಂಕ) ಅಗ್ರಸ್ಥಾನದೊಂದಿಗೆ ಸ್ಟೀಲರ್ಸ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ನಾಲ್ಕರ ಘಟ್ಟದಲ್ಲಿ 28–25ರಿಂದ ಯು.ಪಿ ಯೋಧಾಸ್ ತಂಡವನ್ನು ಹಿಮ್ಮೆಟ್ಟಿಸಿ ಫೈನಲ್ ತಲುಪಿತ್ತು.
ಮೂರರಿಂದ ಐದು ಆವೃತ್ತಿವರೆಗೆ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದ ಪೈರೇಟ್ಸ್ ತಂಡಕ್ಕೆ ಇದು ಐದನೇ ಫೈನಲ್ ಪಂದ್ಯವಾಗಿತ್ತು. ಗುಂಪು ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ತಂಡವು ಎಲಿಮಿನೇಟರ್ ಸುತ್ತಿನಲ್ಲಿ ಯು ಮುಂಬಾ ತಂಡವನ್ನು ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ ಡೆಲ್ಲಿ ದಬಾಂಗ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿತ್ತು.
ಸ್ಟೀಲರ್ಸ್‌ನ ಮಹಮ್ಮದ್ ರೇಜಾ ಶಾಡ್ಲೊಯಿ (ಟೂರ್ನಿಯ ಮೌಲ್ಯಯುತ ಆಟಗಾರ), ಪೈರೇಟ್ಸ್‌ನ ದೇವಾಂಕ್ (ಬೆಸ್ಟ್ ರೇಡರ್), ತಮಿಳ್ ತಲೈವಾಸ್‌ನ ನಿತೇಶ್ ಕುಮಾರ್ (ಬೆಸ್ಟ್ ಡಿಫೆಂಡರ್), ತೆಲುಗು ಟೈಟನ್ಸ್‌ನ ಮಂಜೀತ್ (ಸೂಪರ್ ರೇಡರ್), ಪೈರೇಟ್ಸ್‌ನ ಅಂಕಿತ್ (ಬೆಸ್ಟ್ ಟ್ಯಾಕಲ್) ಗೌರವಕ್ಕೆ ಪಾತ್ರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.