ADVERTISEMENT

ಪ್ರೊ ಕಬಡ್ಡಿ ಲೀಗ್‌ | ರಾಕೇಶ್ ನರ್ವಾಲ್ ಮಿಂಚು: ಗುಜರಾತ್ ಜಯಭೇರಿ

ಪ್ರೊ ಕಬಡ್ಡಿ ಲೀಗ್ : ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 16:06 IST
Last Updated 23 ಡಿಸೆಂಬರ್ 2021, 16:06 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್‌ ಆಟಗಾರರ ಹಣಾಹಣಿ  
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್‌ ಆಟಗಾರರ ಹಣಾಹಣಿ     

ಬೆಂಗಳೂರು: ರಾಕೇಶ್ ನರ್ವಾಲ್ ಮತ್ತು ಗಿರೀಶ ಎರ್ನಕ್ ಅವರ ಅಮೋಘ ಆಟದ ಬಲದಿಂದ ಗುಜರಾತ್ ಜೈಂಟ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ ನಲ್ಲಿ ಜಯಭೇರಿ ಬಾರಿಸಿತು.

ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಗುಜರಾತ್ ತಂಡವು 34–27ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಜಯಿಸಿತು.

ರಾಕೇಶ್ ನರ್ವಾಲ್‌ ರೇಡಿಂಗ್‌ನಲ್ಲಿ ಆರು ಮತ್ತು ಒಂದು ಬೋನಸ್ ಅಂಕ ಗಳಿಸಿದರು. ಗಿರೀಶ ಎರ್ನಕ್ ಟ್ಯಾಕಲ್‌ನಲ್ಲಿ ಏಳು ಪಾಯಿಂಟ್ಸ್‌ ಕಾಣಿಕೆ ನೀಡಿದರು.

ADVERTISEMENT

ಪಿಂಕ್ ಪ್ಯಾಂಥರ್ಸ್ ತಂಡದ ಅರ್ಜುನ್ ದೇಶ್ವಾಲ್ ಕೂಡ ದಿಟ್ಟ ಹೋರಾಟ ಮಾಡಿದರು. ಅವರು ಮೂರು ಬೋನಸ್ ಸಹಿತ ಒಟ್ಟು 10 ಪಾಯಿಂಟ್‌ಗಳನ್ನು ರೇಡಿಂಗ್‌ನಲ್ಲಿ ಜೀಬಿಗಿಳಿಸಿದರು.

ಇದರಿಂದಾಗಿ ಪಂದ್ಯದ ಮೊದಲರ್ಧವು ರೋಚಕವಾಗಿತ್ತು. ಅರ್ಧವಿರಾಮದ ವೇಳೆಗೆ ಗುಜರಾತ್ ತಂಡವು 19–17ರಿಂದ ಅಲ್ಪ ಮುನ್ನಡೆ ಸಾಧಿಸಿತ್ತು.

ವಿರಾಮದ ನಂತರದಲ್ಲಿ ಆಟ ಮತ್ತಷ್ಟು ರಂಗೇರಿತು. ಈ ಹಂತದಲ್ಲಿ ಗುಜರಾತ್ ತಂಡ ಎರಡು ಬಾರಿ ಎದುರಾಳಿಯ ಅಂಕಣವನ್ನು ಖಾಲಿ ಮಾಡಿತು. ರಕ್ಷಣಾತ್ಮಕ ತಂತ್ರಗಳಲ್ಲಿ ಮೇಲುಗೈ ಸಾಧಿಸಿತು. ದಾಳಿಯಲ್ಲಿಯೂ ಮುಂಚೂಣಿಯಲ್ಲಿತ್ತು. ಒಂದು ಅಥವಾ ಎರಡು ಪಾಯಿಂಟ್‌ಗಳ ಮುನ್ನಡೆ ಕಾಯ್ದುಕೊಳ್ಳುತ್ತ ಸಾಗಿದ ಗುಜರಾತ್ ತಂಡವು ಅಂತಿಮವಾಗಿ ಏಳು ಪಾಯಿಂಟ್‌ಗಳ ಅಂತರದ ಜಯಗಳಿಸುವಲ್ಲಿ ಯಶಸ್ವಿಯಾಯಿತು. ತಂಡದ ರಾಕೇಶ್ ಸಂಗ್ರಾಯ್ ರೇಡಿಂಗ್‌ನಲ್ಲಿ ಮಿಂಚಿದರು. ಒಟ್ಟು ಅರ್ಧ ಡಜನ್ ಪಾಯಿಂಟ್‌ಗಳನ್ನು ತಂಡಕ್ಕೆ ಕಾಣಿಕೆ ನೀಡಿದರು.

ಪ್ಯಾಂಥರ್ಸ್ ತಂಡದಲ್ಲಿ ದೀಪಕ್ ನಿವಾಸ್ ಹೂಡಾ ರೇಡಿಂಗ್‌ನಲ್ಲಿ ಮೂರು ಮತ್ತು ಒಂದು ಬೋನಸ್ ಪಾಯಿಂಟ್ ಗಳಿಸಿದರು. ಸಂದೀಪ್ ಧುಳ್ ಮೂರು ಟ್ಯಾಕಲ್ ಪಾಯಿಂಟ್ ಗಳಿಸಿದರು. ನಿತಿನ್ ರಾವಳ್ ಮತ್ತು ಅಮಿತ್ ಹೂಡಾ ತಲಾ ಎರರಡು ಪಾಯಿಂಟ್‌ಗಳ ಕಾಣಿಕೆ ನೀಡಿದರು. ಆದರೆ ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.