ADVERTISEMENT

ಪ್ರೊ ಕಬಡ್ಡಿ: ಪುಣೇರಿ ಪಲ್ಡನ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 19:31 IST
Last Updated 27 ಜನವರಿ 2022, 19:31 IST

ಬೆಂಗಳೂರು: ಮೋಹಿತ್ ಗೊಯತ್ ಮತ್ತು ಅಸ್ಲಂ ಇನಾಮದಾರ್ ಅವರ ಮಿಂಚಿನ ಆಟದಿಂದಾಗಿ ಪುಣೇರಿ ಪಲ್ಡನ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯಭೇರಿ ಬಾರಿಸಿತು.

ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಪುಣೇರಿ ತಂಡವು 44–38ರಿಂದ ಯುಪಿ ಯೋಧಾ ವಿರುದ್ಧ ಗೆದ್ದಿತು. ‌

ರೇಡರ್ ಮೋಹಿತ್ ಗೋಯತ್ 14 ಅಂಕ ಮತ್ತು ಅಸ್ಲಂ 12 ಅಂಕಗಳನ್ನು ರೇಡಿಂಗ್‌ನಲ್ಲಿ ತಂದುಕೊಟ್ಟರು. ಇದರಿಂದಾಗಿ ತಂಡವು ಗೆಲುವಿನತ್ತ ಮುನ್ನಡೆಯಿತು. ಯೋಧಾ ತಂಡದ ಸುರೇಂದರ್ ಗಿಲ್ 16 ಅಂಕ ಗಳಿಸಿದರು.

ADVERTISEMENT

ಪಂದ್ಯದ ಮೊದಲಾರ್ಧದ ವಿರಾಮದ ವೇಳೆಗೆ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದ್ದವು. ಪುಣೇರಿ ತಂಡವು 21–18ರಿಂದ ಮುನ್ನಡೆಯಲ್ಲಿತ್ತು. ವಿರಾಮದ ನಂತರವೂ ಇದೇ ರೀತಿಯ ಪೈಪೋಟಿ ಮುಂದುವರಿಯಿತು. ಕೊನೆಯವರೆಗೂ ಇದೇ ಅಂತರವನ್ನು ಕಾಯ್ದುಕೊಂಡ ಪುಣೇರಿ ಮಿಂಚಿತು.

ಪುಣೇರಿ ತಂಡವು ಒಟ್ಟು 14 ಪಂದ್ಯಗಳನ್ನು ಆಡಿದೆ. ಏಳು ಗೆದ್ದು, ಅಷ್ಟೇ ಪಂದ್ಯಗಳಲ್ಲಿ ಸೋತಿದೆ. ಯೋಧಾ ತಂಡವು ಐದರಲ್ಲಿ ಗೆದ್ದು, ಆರರಲ್ಲಿ ಸೋತಿದೆ ಮತ್ತು ಮೂರರಲ್ಲಿ ಟೈ ಮಾಡಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.