ADVERTISEMENT

ವೃತ್ತಿಪರತೆಗೆ ವಿರುದ್ಧವಾದ ಹೇಳಿಕೆ: ಗಾಫ್‌ಗೆ ಕ್ಷಮೆಯಾಚಿಸಿದ ಸಬಲೆಂಕಾ

ಏಜೆನ್ಸೀಸ್
Published 17 ಜೂನ್ 2025, 12:31 IST
Last Updated 17 ಜೂನ್ 2025, 12:31 IST
<div class="paragraphs"><p>ಅರಿನಾ ಸಬಲೆಂಕಾ</p></div>

ಅರಿನಾ ಸಬಲೆಂಕಾ

   

ರಾಯಿಟರ್ಸ್‌ ಚಿತ್ರ

ಬರ್ಲಿನ್‌: ಫ್ರೆಂಚ್‌ ಓಪನ್ ಚಾಂಪಿಯನ್‌ಷಿಪ್‌ ಫೈನಲ್‌ ನಂತರ, ‘ವೃತ್ತಿಪರತೆಗೆ ವಿರುದ್ಧವಾದ’ ಹೇಳಿಕೆ ನೀಡಿದ್ದಕ್ಕಾಗಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರು  ಅಮೆರಿಕದ ಆಟಗಾರ್ತಿ ಕೊಕೊ ಗಾಫ್‌ ಅವರಿಗೆ ಪತ್ರ ಬರೆದು ಕ್ಷಮೆ ಯಾಚಿಸಿದ್ದಾರೆ.

ADVERTISEMENT

ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಗಾಫ್‌ 6–7 (5), 6–2, 6–4 ರಿಂದ ಸಬಲೆಂಕಾ ಅವರನ್ನು ಸೋಲಿಸಿದ್ದರು. ಪ್ಯಾರಿಸ್‌ನಲ್ಲಿ ಫೈನಲ್‌ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಬೆಲರೂಸ್‌ನ ಆಟಗಾರ್ತಿ, ‘ಗಾಫ್‌ ಅವರ ಉತ್ತಮ ಆಟಕ್ಕಿಂತ ಹೆಚ್ಚಾಗಿ ನನ್ನ ತಪ್ಪುಗಳಿಂದಲೇ ಪಂದ್ಯ  ಸೋತಿದ್ದೆ’ ಎಂಬರ್ಥದಲ್ಲಿ ಮಾತನಾಡಿದ್ದರು.

‘ಈ ಹೇಳಿಕೆ ವೃತ್ತಿಘನತೆಗೆ ತಕ್ಕುದಾಗಿರಲಿಲ್ಲ’ ಎಂದು ಯುರೊಸ್ಪೋರ್ಟ್‌ ಜರ್ಮನಿ ಚಾನೆಲ್‌ಗೆ ನೀಡಿದ ಹೇಳಿಕೆಯಲ್ಲಿ ಸಬಲೆಂಕಾ ತಿಳಿಸಿದ್ದಾರೆ. ‘ಭಾವನಾತ್ಮಕವಾಗಿ ಮಾತನಾಡುವ ಭರದಲ್ಲಿ ಆಗ ಆ ರೀತಿ ಹೇಳಿದ್ದೆ. ಹಾಗೆ ಹೇಳಿದ್ದಕ್ಕೆ ನನಗೆ ಅತೀವ ವಿಷಾದವಿದೆ. ಮನುಷ್ಯಳಾಗಿ ನನ್ನಿಂದ ತಪ್ಪಾಗಿದೆ. ನಾನು ಬದುಕಿನ ಪಾಠ ಕಲಿಯುತ್ತಿರುವವಳು. ನಂತರ ನಾನು ಕೊಕೊ ಅವರಿಗೆ ಪತ್ರ ಬರೆದಿದ್ದೆ. ಅಂದೇ ಅಲ್ಲ; ಇತ್ತೀಚೆಗೆ ಬರೆದಿದ್ದೆ’ ಎಂದು ಹೇಳಿದ್ದಾರೆ.

ಫೈನಲ್ ಪಂದ್ಯದಲ್ಲಿ ಸಬಲೆಂಕಾ 37 ‘ವಿನ್ನರ್‌’ಗಳನ್ನು ಆಡಿದ್ದರು. ಆದರೆ ತಾವೇ ಆಗಿ 70 ತಪ್ಪುಗಳನ್ನು ಮಾಡಿದ್ದರು. ಗಾಫ್‌ ಅವರಿಂದ 30 ತಪ್ಪುಗಳಾಗಿದ್ದವು.

‘ಕ್ಷಮೆ ಕೇಳಲು ಪತ್ರ ಬರೆದೆ. ಆ ಮೂಲಕ ಅವರು ಟೂರ್ನಿಯ ಗೆಲುವಿಗೆ ಸಂಪೂರ್ಣವಾಗಿ ಯೋಗ್ಯರಾಗಿದ್ದರು ಎನ್ನುವುದನ್ನು ನನಗೆ ಹೇಳಬೇಕಿತ್ತು. ಅವರ ಬಗ್ಗೆ ನನಗೆ ಗೌರವವಿದೆ’ ಎಂದಿದ್ದಾರೆ.

ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸಬಲೆಂಕಾ, 2023ರ ಅಮೆರಿಕ ಓಪನ್ ಫೈನಲ್‌ನಲ್ಲೂ ಮೊದಲ ಸೆಟ್‌ ಗೆದ್ದ ನಂತರ ಗಾಫ್‌ ಅವರಿಗೆ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.