ನವದೆಹಲಿ: ವಿವಿಧ ಕ್ರೀಡಾ ಯೋಜನೆಗಳ ಮೂಲಕ ಅನುದಾನ ಪಡೆಯುವ ಭಾರತದ ಟೆನ್ನಿಸ್ ಆಟಗಾರರು ದೇಶದ ಕರ್ತವ್ಯಕ್ಕೆ ತಮ್ಮ ಆದ್ಯತೆ ನೀಡಬೇಕು. ಯಾವುದೇ ‘ಸಕಾರಣ‘ ನೀಡಿ ದೇಶಕ್ಕಾಗಿ ಆಡುವುದನ್ನು ನಿರಾಕರಿಸಿದಲ್ಲಿ ನೀಡಿರುವ ಅನುದಾನ ವಸೂಲು ಮಾಡಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಖಡಕ್ ಎಚ್ಚರಿಕೆ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಪ್ರಾಧಿಕಾರ, 'ತಾವು ಪಡೆದ ಹಣಕ್ಕೆ ಆಟಗಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್‌ಗೆ (TAGG) ಆಯ್ಕೆಯಾದ ಆಟಗಾರರು ತಾವು ಪಡೆದ ನೆರವಿನ ಕುರಿತು ಲಿಖಿತ ಹೇಳಿಕೆ ನೀಡಬೇಕು. ಆ ಮೂಲಕ ದೇಶದ ಕ್ರೀಡಾ ಸಾಧನೆಗೆ ತಮ್ಮ ಬದ್ಧತೆ ಮತ್ತು ಕೊಡುಗೆ ನೀಡಬೇಕು’ ಎಂದು ಹೇಳಿದೆ.
‘ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕುರಿತ ಒಪ್ಪಿಗೆ ಹಾಗೂ ಲಭ್ಯತೆ ಖಾತ್ರಿಯಾದ ನಂತರವೇ ವಿವಿಧ ಯೋಜನೆಗಳಡಿ ಆರ್ಥಿಕ ನೆರವನ್ನು ಕ್ರೀಡಾಪಟುಗಳು ಪಡೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಾವಳಿಗಳಾದ ಬಿಲ್ಲಿ ಜೀನ್ ಕಿಂಗ್ ಕಪ್, ಡೇವಿಸ್ ಕಪ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಇವರು ಭಾರತವನ್ನು ಪ್ರತಿನಿಧಿಸುವವರಾಗಿದ್ದಾರೆ. ಅಖಿಲ ಭಾರತ ಟೆನ್ನಿಸ್ ಸಂಘ (AITA) ಮೂಲಕ ಆಯ್ಕೆಯಾದಲ್ಲಿ ಅವರಿಗೆ ಈ ಯೋಜನೆಗಳ ಮೂಲಕ ನೆರವು ಸಿಗಲಿದೆ’ ಎಂದು ಹೇಳಿದೆ.
‘ಆಟಗಾರರ ಆಯ್ಕೆ ಸಂದರ್ಭದಲ್ಲಿ ‘ಸಕಾರಣ‘ ನೀಡಿ ಭಾಗವಹಿಸದಿರಲು ನಿರ್ಧರಿಸಿದಲ್ಲಿ ಅಂಥವರಿಂದ ಅವರು ಪಡೆದ ಆರ್ಥಿಕ ನೆರವನ್ನು ಸೂಕ್ತ ಮಾರ್ಗಸೂಚಿ ಅನ್ವಯವೇ ಆ ದಿನಾಂಕದಿಂದಲೇ ಹಿಂದಕ್ಕೆ ಪಡೆಯಲು ಆದೇಶಿಸಲಾಗುವುದು’ ಎಂದು ಪ್ರಾಧಿಕಾರ ತನ್ನ ಆದೇಶದಲ್ಲಿ ಹೇಳಿದೆ.
2026ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಗಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ (TOPS), TAGG ಆರಂಭಿಸಿದೆ. ಕೆಲ ಆಟಗಾರರು ಈ ಹಿಂದೆ ಡೆವಿಸ್ ಕಪ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಗ್ರ ಕ್ರಮಾಂಕದ ಆಟಗಾರ ಸುಮಿತ್ ನಗಾಲ್ ಅವರು 2024ರಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರು. ಜತೆಗೆ ಸ್ವೀಡನ್ (204) ಮತ್ತು ಟೊಗೊ (2025) ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲೂ ಒಲ್ಲೆ ಎಂದಿದ್ದರು.
ಶಶಿಕುಮಾರ್ ಮುಕುಂದ್ ಅವರು ಪಾಕಿಸ್ತಾನ ಮತ್ತು ಸ್ವೀಡನ್ ಪಂದ್ಯಗಳಿಂದ ಹಿಂದೆ ಸರಿದಿದ್ದರು. ಆದರೆ ಕಳೆದ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದ ಟೊಗೊ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತಂಡದಲ್ಲಿದ್ದರು. ಯುಕಿ ಭಾಂಬ್ರಿ ಅವರೂ ಸ್ವೀಡನ್ ಹಾಗೂ ಟೊಗೊಕ್ಕೆ ಅಲಭ್ಯರಾಗಿದ್ದರು.
ಮಹಿಳೆಯರಲ್ಲಿ ಶ್ರಿವಳಿ ಭಮಿದಿಪಟಿ, ಶಹಜಾ ಯಮ್ಲಪಲ್ಲಿ, ವೈದೇಹಿ ಚೌಧರಿ, ರುತುಜಾ ಭೋಸಲೆ, ಮಾಯಾ ರಾಜೇಶ್ವರನ್ ಅವರ ಹೆಸರುಗಳೂ ಈ ಯೋಜನೆಗಳಲ್ಲಿ ಇವೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಈ ಆದೇಶವನ್ನು ಭಾರತದ ಡೆವಿಸ್ ಕಪ್ ನಾಯಕ ರೋಹಿತ್ ರಾಜಪಾಲ್ ಮತ್ತು ಬಿಲ್ಲೀ ಜೀನ್ ಕಿಂಗ್ ಕಪ್ ನಾಯಕ ವಿಶಾಲ್ ಉಪ್ಪಲ್ ಸ್ವಾಗತಿಸಿದ್ದಾರೆ.
‘ಕ್ರೀಡಾಪಟುಗಳನ್ನು ಉತ್ತರದಾಯಿಗಳನ್ನಾಗಿ ಮಾಡಲು ಸರ್ಕಾರ ಹೊರಟಿದೆ. ಇದು ತಪ್ಪು ನಡೆಯಾಗಲು ಸಾಧ್ಯವಿಲ್ಲ. ಬೆಂಬಲಿಸಲು ಸರ್ಕಾರವು ಕ್ರೀಡಾಪಟುಗಳ ಹೆಸರುಗಳನ್ನು ನಮೂದಿಸಿದೆ. ರಾಷ್ಟ್ರದ ಕರ್ತವ್ಯಕ್ಕೆ ಲಭ್ಯರಿದ್ದು ಬೆಂಬಲಿಸುವಂತೆ ಹೇಳಿರುವುದು ಉತ್ತಮ ಸಂಗತಿ’ ಎಂದು ರಾಜ್‌ಪಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.