ADVERTISEMENT

Indonesia Open 2025 | ಎಂಟರ ಘಟ್ಟಕ್ಕೆ ಸಾತ್ವಿಕ್‌–ಚಿರಾಗ್

ಇಂಡೊನೇಷ್ಯಾ ಓಪನ್‌: ಸಿಂಧುಗೆ ಮತ್ತೆ ನಿರಾಸೆ

ಪಿಟಿಐ
Published 5 ಜೂನ್ 2025, 13:45 IST
Last Updated 5 ಜೂನ್ 2025, 13:45 IST
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್ ಶೆಟ್ಟಿ
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್ ಶೆಟ್ಟಿ   

ಜಕಾರ್ತಾ: ಭಾರತದ ಅಗ್ರ ಪುರುಷರ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ,ಇಂಡೊನೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಆದರೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅವರು ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರು.

2023ರಲ್ಲಿ ಈ ಟೂರ್ನಿಯ ಚಾಂಪಿಯನ್ನರಾಗಿದ್ದ ಸಾತ್ವಿಕ್‌– ಚಿರಾಗ್ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಕ್ಯೇರ್‌– ಫ್ರೆಡರಿಕ್‌ ಸೊಗಾರ್ಡ್‌ ಜೋಡಿಯ ವಿರುದ್ಧ ಒತ್ತಡದ ಸನ್ನಿವೇಶದಲ್ಲೂ ಸಂಯಮದಿಂದ ಆಡಿದರು. 68 ನಿಮಿಷಗಳ ತೀವ್ರ ಹೋರಾಟದ ಪಂದ್ಯವನ್ನು 16–21, 21–18, 22–20ರಲ್ಲಿ ಗೆದ್ದರು. ಡೆನ್ಮಾರ್ಕ್‌ನ ಜೋಡಿ ವಿಶ್ವ ಕ್ರಮಾಂಕದಲ್ಲಿ 16ನೇ ಸ್ಥಾನ ಪಡೆದಿದೆ.

ಹೋದ ವಾರವಷ್ಟೇ ಸಿಂಗಪುರ ಓಪನ್ 750 ಟೂರ್ನಿಯ ಸೆಮಿಫೈನಲ್ಸ್ ತಲುಪಿದ್ದ ವಿಶ್ವದ ಮಾಜಿ ಅಗ್ರಮಾನ್ಯ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಮಾನ್‌ ವೀ ಚೊಂಗ್– ಕೈ ವುನ್ ಟೀ ಜೋಡಿಯನ್ನು ಎದುರಿಸಲಿದೆ.

ADVERTISEMENT

ಸಿಂಧು ನಿರ್ಗಮನ:

ಇದಕ್ಕೆ ಮೊದಲು ಭಾರತದ ಪಿ.ವಿ.ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಎಂಟನೇ ಕ್ರಮಾಂಕದ ಆಟಗಾರ್ತಿ ಪೋರ್ನ್‌ಪವೀ ಚೊಚುವಾಂಗ್‌ ಅವರಿಗೆ ಮಣಿದರು. ಸಿಂಧು ನಿರ್ಣಾಯಕ ಗೇಮ್‌ನ ಒಂದು ಹಂತದಲ್ಲಿ 15–11ರಲ್ಲಿ ಮುನ್ನಡೆ ಪಡೆದಿದ್ದರೂ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಥಾಯ್ಲೆಂಡ್‌ನ ಆಟಗಾರ್ತಿ 78 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 20–22, 21–10, 21–18 ರಿಂದ ಜಯಗಳಿಸಿದರು. 

ಭಾರತದ ಉಳಿದ ಸ್ಪರ್ಧಿಗಳಿಗೂ ನಿರಾಶೆ ಕಾದಿತ್ತು. ಮಿಶ್ರ ಡಬಲ್ಸ್ ಎರಡನೇ ಸುತ್ತಿನಲ್ಲಿ ಸತೀಶ್‌ ಕರುಣಾಕರನ್ ಮತ್ತು ಆದ್ಯಾ ವರಿಯತ್ ಜೋಡಿ ಕೇವಲ 25 ನಿಮಿಷಗಳಲ್ಲಿ 7–21, 12–21 ರಲ್ಲಿ ನೇರ ಗೇಮ್‌ಗಳಿಂದ ಆರನೇ ಶ್ರೇಯಾಂಕದ ದೇಚೊಪೊಲ್ ಪುವಾರನುಕ್ರೊ– ಸುಪಿಸ್ಸರಾ ಪೇವಸಂಪ್ರನ್ ಜೋಡಿಗೆ (ಥಾಯ್ಲೆಂಡ್‌) ಜೋಡಿಗೆ ಮಣಿಯಿತು.

ಮಹಿಳೆಯರ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌– ಟ್ರಿಸಾ ಜೋಳಿ ಜೋಡಿ 13–21, 22–24ರಲ್ಲಿ ಜಪಾನಿನ ಯುಕಿ ಫುಕುಶಿಮಾ– ಮಯು ಮಾತ್ಸುಮೋಟೊ ಜೋಡಿಗೆ ಶರಣಾಯಿತು. ಭಾರತದ ಜೋಡಿ, ಗಾಯಾಳಾಗಿ ಪುನರಾಗಮನ ಮಾಡಿದ ನಂತರ ಆಡುತ್ತಿರುವ ಎರಡನೇ ಟೂರ್ನಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.