ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
–ಪಿಟಿಐ ಚಿತ್ರ
ಸಿಂಗಪುರ: ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಬುಧವಾರ ಸುಲಭ ಗೆಲುವು ಸಾಧಿಸಿದರು. ಆದರೆ ಪ್ರಮುಖ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಅವರು ಮೊದಲ ಸುತ್ತಿನ ಪಂದ್ಯ ನಡೆಯುತ್ತಿದ್ದಾಗ ಬೆನ್ನುನೋವಿನ ಕಾರಣ ಅರ್ಧದಲ್ಲೇ ಹಿಂದೆಸರಿದರು.
ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ ಚಿರಾಗ್ ಅವರಿಗೆ ಬೆನ್ನುನೋವು ಕಾಡಿ ಹಿಂದೆಸರಿದ ಬಳಿಕ ಇದೇ ಮೊದಲ ಬಾರಿ ಭಾರತದ ಆಟಗಾರರು ಕಣಕ್ಕಿಳಿದಿದ್ದರು. ಆದರೆ ವಿಶ್ವದ ಮಾಜಿ ಅಗ್ರಮಾನ್ಯ ಡಬಲ್ಸ್ ಜೋಡಿ 40 ನಿಮಿಷಗಳಲ್ಲಿ ಮಲೇಷ್ಯಾದ ಚೂಂಗ್ ಹಾನ್ ಜಿಯಾನ್– ಮುಹಮ್ಮದ್ ಹೈಕಲ್ ಜೋಡಿಯನ್ನು 21–16, 21–13 ರಿಂದ ಹಿಮ್ಮೆಟ್ಟಿಸಿ 16ರ ಸುತ್ತಿಗೆ ಮುನ್ನಡೆಯಿತು. ಭಾರತದ ಜೋಡಿ ಪ್ರಸ್ತುತ 27ನೇ ಕ್ರಮಾಂಕದಲ್ಲಿದ್ದರೆ, ಮಲೇಷ್ಯಾದ ಆಟಗಾರರು 41ನೇ ಕ್ರಮಾಂಕದಲ್ಲಿದ್ದಾರೆ.
ಭಾರತದ ಅಗ್ರ ಸಿಂಗಲ್ಸ್ ಆಟಗಾರ ಹಾಗೂ ವಿಶ್ವ ಕ್ರಮಾಂಕದಲ್ಲಿ 17ನೇ ಸ್ಥಾನದಲ್ಲಿರುವ ಸೇನ್, ಚೀನಾದ ಲಿನ್ ಚುನ್–ಯಿ ವಿರುದ್ಧದ ಪಂದ್ಯದಲ್ಲಿ ಬೆನ್ನು ನೋವಿಗೆ ಒಳಗಾದರು. ಸೇನ್ ಮೊದಲ ಗೇಮ್‌ಅನ್ನು 21–15 ರಿಂದ ಪಡೆದಿದ್ದರು. ಆದರೆ ಚೀನಾದ ಆಟಗಾರ ಪುಟಿದೆದ್ದು 21–17ರಲ್ಲಿ ಎರಡನೇ ಗೇಮ್ ತನ್ನದಾಗಿಸಿಕೊಂಡರು. ಮೂರನೇ ಗೇಮ್‌ನಲ್ಲಿ ಚೂಝಗ್ 13–5ರಲ್ಲಿ ಮುನ್ನಡೆಯಲ್ಲಿದ್ದಾಗ ಸೇನ್ ಆಟ ಬಿಟ್ಟುಕೊಟ್ಟರು.
ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್ ಮತ್ತು ರುತ್ವಿಕಾ ಶಿವಾನಿ ಗದ್ದೆ ಜೋಡಿ ಪ್ರಿಕ್ವಾರ್ಟರ್‌ಫೈನಲ್ ತಲುಪಿತು. ಇವರಿಬ್ಬರು 21–16, 21–19 ರಿಂದ ಅಮೆರಿಕದ ಚೆನ್ ಝಿ ಯಿ– ಫ್ರಾನ್ಸೆಸ್ಕಾ ಕಾರ್ಬೆಟ್ ಜೋಡಿಯನ್ನು 35 ನಿಮಿಷಗಳಲ್ಲಿ ಮಣಿಸಿತು.
ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಮತ್ತು ಉನ್ನತಿ ಹೂಡಾ ಅವರು ಸ್ಫೂರ್ತಿಯುತ ಹೋರಾಟ ತೋರಿದರೂ ಅಂತಿಮವಾಗಿ ಪ್ರಬಲ ಎದುರಾಗಳಿಗೆ ಮಣಿದರು.
ಆಕರ್ಷಿ, 58 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21–17, 13–21, 7–21 ರಿಂದ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ್ತಿ ಹಾನ್ ಯುಯಿ (ಚೀನಾ) ಅವರಿಗೆ ಮಣಿದರು. ಉನ್ನತಿ ಸಹ ಮೊದಲ ಗೇಮ್ ಗೆದ್ದ ನಂತರ ಹಿನ್ನಡೆ ಕಂಡು 21–13, 9–21, 15–21 ರಿಂದ ಎರಡನೇ ಕ್ರಮಾಂಕದ ಆಟಗಾರ್ತಿ ವಾಂಗ್ ಝಿ ಯಿ ಅವರಿಗೆ ಸೋತರು.
ಆದರೆ ಅನುಪಮಾ ಉಪಾಧ್ಯಾಯ 12–21, 16–21ರಲ್ಲಿ ಚೀನಾ ತೈಪೆಯ ಸುಂಗ್ ಶುವೊ ಯುನ್ ಅವರೆದುರು ಹಿಮ್ಮೆಟ್ಟಿದರು.
ಮಹಿಳಾ ಡಬಲ್ಸ್‌ನಲ್ಲಿ ವೈಷ್ಣವಿ ಖಾಡೇಕರ್– ಅಲಿಶಾ ಖಾನ್ ಜೋಡಿ 8–21, 9–21 ರಲ್ಲಿ ಆಸ್ಟ್ರೇಲಿಯಾದ ಗ್ರೊನ್ಯಾ ಸೊಮರ್‌ವಿಲೆ– ಆ್ಯಂಜೆಲಾ ಯು ಎದುರು ಸೋಲನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.