ADVERTISEMENT

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್ ಸವಾಲು ಅಂತ್ಯ

ಲಕ್ಷ್ಯ, ಮಾಳವಿಕಾ ಶುಭಾರಂಭ

ಪಿಟಿಐ
Published 5 ಏಪ್ರಿಲ್ 2022, 12:38 IST
Last Updated 5 ಏಪ್ರಿಲ್ 2022, 12:38 IST
ಲಕ್ಷ್ಯ ಸೇನ್– ಪಿಟಿಐ ಚಿತ್ರ
ಲಕ್ಷ್ಯ ಸೇನ್– ಪಿಟಿಐ ಚಿತ್ರ   

ಸಂಚಿಯೊನ್‌, ಕೊರಿಯಾ: ಜಿದ್ದಾಜಿದ್ದಿನ ಹೋರಾಟದಲ್ಲಿ ಗೆದ್ದ ಲಕ್ಷ್ಯ ಸೇನ್ ಮತ್ತು ಮಾಳವಿಕಾ ಬಂಸೋಡ್ ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಲಕ್ಷ್ಯ14-21, 21-16, 21-18ರಿಂದ ಸ್ಥಳೀಯ ಆಟಗಾರ ಚೊ ಜಿ ಹೂನ್ ಅವರ ಸವಾಲು ಮೀರಿದರು.

ಮೊದಲ ಗೇಮ್‌ ಸೋತರೂ ಛಲಬಿಡದೆ ಆಡಿದ ಲಕ್ಷ್ಯ ಅವರಿಗೆ ಗೆಲುವು ಒಲಿಯಿತು.

ADVERTISEMENT

ಭಾರತದ ಆಟಗಾರನಿಗೆ ಮುಂದಿನ ಪಂದ್ಯದಲ್ಲಿ ಇಂಡೊನೇಷ್ಯಾದ ಹಿರೇನ್‌ ರುಸ್ಟಾವಿಟೊ ಸವಾಲು ಎದುರಾಗಿದೆ.

ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ 20–22, 22–20, 21–10ರಿಂದ ಚೀನಾ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಹಾನ್‌ ಯು ಅವರನ್ನು ಮಣಿಸಿದರು. ಶ್ರೇಯಾಂಕರಹಿತ ಆಟಗಾರ್ತಿ ಮಾಳವಿಕಾ ಎರಡನೇ ಸುತ್ತಿನಲ್ಲಿ ಆರನೇ ಶ್ರೇಯಾಂಕದ, ಥಾಯ್ಲೆಂಡ್‌ನ ಪಾರ್ನ್‌ಪವಿ ಚೋಚುವಾಂಗ್ ಅವರನ್ನು ಎದುರಿಸುವರು.

ಪ್ರಣಯ್‌ಗೆ ನಿರಾಸೆ: ಸ್ವಿಸ್‌ ಓಪನ್ ಟೂರ್ನಿಯ ಫೈನಲ್ ತಲುಪಿದ್ದ ಎಚ್‌.ಎಸ್‌.ಪ್ರಣಯ್ ಅವರಿಗೆ ಮೊದಲ ಸುತ್ತಿನಲ್ಲೇ ನಿರಾಸೆ ಕಾಡಿತು. ಮಲೇಷ್ಯಾದ ಚೀಮ್‌ ಜೂನ್‌ ವೇ ಎದುರು ಕಣಕ್ಕಿಳಿದಿದ್ದ ಅವರು 17–21, 7–21ರಿಂದ ಸೋಲನುಭವಿಸಿದರು.

ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್‌ ಗರಗ ಮತ್ತು ವಿಷ್ಣುವರ್ಧನ ಗೌಡ್‌ ಪಂಜಾಲ ಜೋಡಿಯು14-21 19-21ರಿಂದ ಇಂಡೊನೇಷ್ಯಾದ ಪ್ರಮುದ್ಯ ಕುಸುಮವರ್ದನ ಮತ್ತು ಯೆರೆಮಿಯಾ ಎರಿಚ್‌ ಯೊಚೆ ಯಾಕೂಬ್‌ ರಾಂಬಿತನ್ ಎದುರು ಎಡವಿತು. ಬೊಕ್ಕ ನವನೀತ್ ಮತ್ತು ಬಿ. ಸುಮೀತ್ ರೆಡ್ಡಿ ಕೂಡ ಮೊದಲ ತಡೆದ ದಾಟಲಿಲ್ಲ. ಈ ಜೋಡಿಯು 14–21, 19–21ರಿಂದ ಮಲೇಷ್ಯಾದ ಒಂಗ್‌ ಯಿವ್ ಸಿನ್‌ ಮತ್ತು ಟಿವ್‌ ಇ ಯಿ ಎದುರು ನಿರಾಸೆ ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.