ADVERTISEMENT

ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಸಿಂಧು, ಶ್ರೀಕಾಂತ್

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯ ಸೇನ್‌, ಬಾಂಸೊಡ್‌ಗೆ ನಿರಾಸೆ

ಪಿಟಿಐ
Published 7 ಏಪ್ರಿಲ್ 2022, 13:03 IST
Last Updated 7 ಏಪ್ರಿಲ್ 2022, 13:03 IST
ಕಿದಂಬಿ ಶ್ರೀಕಾಂತ್ –ಪಿಟಿಐ ಚಿತ್ರ
ಕಿದಂಬಿ ಶ್ರೀಕಾಂತ್ –ಪಿಟಿಐ ಚಿತ್ರ   

ಸಂಚ್ಯೊನ್, ಕೊರಿಯಾ: ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿದ ‍ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಕೊರಿಯಾ ಓಪನ್ ಸೂ‍ಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ವಿಶ್ವ ಕ್ರಮಾಂಕದ ಏಳನೇ ಸ್ಥಾನದಲ್ಲಿರುವ ಸಿಂಧು 26ನೇ ಕ್ರಮಾಂಕದ ಆಟಗಾರ್ತಿ ಅಯಾ ಒಹೊರಿ ವಿರುದ್ಧ 21–15, 21–10ರಲ್ಲಿ ಜಯ ಗಳಿಸಿದರು. ಈ ಮೂಲಕ ಜಪಾನ್ ಆಟಗಾರ್ತಿ ಎದುರು ಈ ವರೆಗೆ ಆಡಿದ ಎಲ್ಲ 12 ಪಂದ್ಯಗಳನ್ನೂ ಗೆದ್ದ ಸಾಧನೆ ತಮ್ಮದಾಗಿಸಿಕೊಂಡರು.

ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಅವರು ಇಸ್ರೇಲನ್‌ ಮಿಶಾ ಜಿಲ್ಬರ್ಮನ್‌ ಎದುರು 21–18, 21–6ರಲ್ಲಿ ಗೆದ್ದರು. ಆದರೆ ಈಚಿನ ಕೆಲವು ಟೂರ್ನಿಗಳಲ್ಲಿ ಅಮೋಘ ಸಾಧನೆ ಮಾಡಿರುವ ಲಕ್ಷ್ಯ ಸೇನ್ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದರು.

ADVERTISEMENT

ಮೂರನೇ ಶ್ರೇಯಾಂಕಿತೆ ಪಿ.ವಿ.ಸಿಂಧು ಎಂಟರ ಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸನಾನ್ ಒಂಗಬಮ್ರುಂಫನ್ ಅವರನ್ನು ಎದುರಿಸುವರು. ಕಳೆದ ತಿಂಗಳಲ್ಲಿ ನಡೆದ ಸ್ವಿಸ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಅವರನ್ನು ಸಿಂಧು ಮಣಿಸಿದ್ದರು. ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಈ ವರ್ಷ ಎರಡು ಸೂಪರ್ 300 ಟೂರ್ನಿಗಳ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬುಸನಾನ್ ಎದುರು ಈ ವರೆಗೆ ಅಡಿರುವ 17 ಪಂದ್ಯಗಳ ಪೈಕಿ 16ರಲ್ಲಿ ಜಯ ಗಳಿಸಿದ್ದಾರೆ.

ಕಿದಂಬಿಗೆ ಸನ್ ವ್ಯಾನ್ ಹೊ ಎದುರಾಳಿ

ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸ್ಥಳೀಯ ಆಟಗಾರ ಹಾಗೂ ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ಒಂದನೇ ಸ್ಥಾನ ಅಲಂಕರಿಸಿದ್ದ ಸನ್ ವ್ಯಾನ್ ಹೊ ಎದುರು ಸೆಣಸುವರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಹಾಗೂ ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್ 20–22, 9–21ರಲ್ಲಿ ವಿಶ್ವ ಕ್ರಮಾಂಕದಲ್ಲಿ 24ನೇ ಸ್ಥಾನದಲ್ಲಿರುವ ಶೆಸರ್ ಹಿರೇನ್ ರುಟ್ಸವಿಟೊಗೆ ಮಣಿದರು. 33 ನಿಮಿಷಗಳಲ್ಲಿ ಪಂದ್ಯ ಮುಕ್ತಾಯ ಕಂಡಿತ್ತು.

ಮಹಿಳಾ ವಿಭಾಗದಲ್ಲಿ ಮಾಳವಿಕಾ ಬಾಂಸೊಡ್ ಕೂಡ ಸೋತು ಹೊರಬಿದ್ದರು. ಥಾಯ್ಲೆಂಡ್‌ನ ಪೊರ್ನಪಾವಿ ಚೊಚುವಾಂಗ್‌ ಎದುರು ಅವರು 8–21, 14–21ರಲ್ಲಿ ಸೋತರು. ಈ ಪಂದ್ಯ 39 ನಿಮಿಷಗಳಲ್ಲಿ ಮುಕ್ತಾಯ ಕಂಡಿತ್ತು.

ಪುರುಷರ ಡಬಲ್ಸ್‌ನಲ್ಲಿ ವಿಶ್ವ ಕ್ರಮಾಂಕದ ಏಳನೇ ಸ್ಥಾನದಲ್ಲಿರುವ ಸಾತ್ವಿಕ್‌ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸಿಂಗಪುರದ ಹೀ ಯಾಂಗ್ ಕಾಯ್‌ ಟೆರಿ ಮತ್ತು ಲೊಹ್ ಕೀನ್ ಹೀನ್‌ ಜೋಡಿಯನ್ನು 21-15, 21-19ರಲ್ಲಿ ಮಣಿಸಿದರು. 36 ನಿಮಿಷಗಳ ಈ ಪಂದ್ಯದ ಗೆಲುವಿನ ಮೂಲಕ ಭಾರತದ ಜೋಡಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿತು.

ಮಿಶ್ರ ಡಬಲ್ಸ್‌ನಲ್ಲಿ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು 20-22, 21-18, 14-21ರಲ್ಲಿ ಐದನೇ ಶ್ರೇಯಾಂಕದ ಚೀನಾ ಜೋಡಿ ಒವು ಕ್ಸುವಾನ್ ಯಿ ಮತ್ತು ಹ್ವಾಂಗ್ ಯಾ ಕಿಯಾಂಗ್‌ ಅವರಿಗೆ ಮಣಿದರು. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್ ಮತ್ತು ಧ್ರುವ ಕಪಿಲ ಅವರು ಎರಡನೇ ಶ್ರೇಯಾಂಕದ ಇಂಡೊನೇಷ್ಯಾ ಆಟಗಾರರಾದ ಮೊಹಮ್ಮದ್ ಅಹ್ಸನ್ ಮತ್ತು ಹೇಂದ್ರ ಸೇತ್ಯವಾನ್ ಎದುರಿನ ಪಂದ್ಯದಲ್ಲಿ 5–8ರ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ನಿವೃತ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.