ADVERTISEMENT

ಐಎಸ್‌ಎಲ್‌: ಮೊಡೊ ಸೊಗೊ ಹ್ಯಾಟ್ರಿಕ್‌

ಪಿಟಿಐ
Published 16 ಡಿಸೆಂಬರ್ 2018, 20:00 IST
Last Updated 16 ಡಿಸೆಂಬರ್ 2018, 20:00 IST
ಗೋಲು ಗಳಿಸಿದ ಎಫ್‌ಸಿ ಮುಂಬೈ ಸಿಟಿ ತಂಡದ ಆಟಗಾರರ ಸಂಭ್ರಮ –ಐಎಸ್‌ಎಲ್ ಚಿತ್ರ
ಗೋಲು ಗಳಿಸಿದ ಎಫ್‌ಸಿ ಮುಂಬೈ ಸಿಟಿ ತಂಡದ ಆಟಗಾರರ ಸಂಭ್ರಮ –ಐಎಸ್‌ಎಲ್ ಚಿತ್ರ   

ಮುಂಬೈ: ಕೇರಳ ಬ್ಲಾಸ್ಟರ್ಸ್‌ ತಂಡವನ್ನು6-1ಗೋಲುಗಳಿಂದ ಮಣಿಸಿದ ಎಫ್‌ಸಿ ಮುಂಬೈ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತು.

ಮುಂಬೈ ಫುಟ್‌ಬಾಲ್ ಅರೆನಾದ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊಡೊ ಸೊಗೊ ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದರೆ, ರಫೆಲ್ ಬಾಸ್ಟೊ ಒಂದು ಗೋಲು ಗಳಿಸಿ ಆತಿಥೇಯರ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಸೊಗೊ 12, 15, 30 ಮತ್ತು 90ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. 70ನೇ ನಿಮಿಷದಲ್ಲಿ ರಫೆಪ್‌ ಮತ್ತು 89ನೇ ನಿಮಿಷದಲ್ಲಿ ಮಥಿಯಾಸ್‌ ಮಿರಾಬಜೆ ಗೋಲು ಗಳಿಸಿದರು.‌ ಬ್ಲಾಸ್ಟರ್ಸ್ ಪರ ಸೆಮಿನ್ಲೆನ್‌ ಡಾಂಗೆಲ್‌ (27ನೇ ನಿ) ಏಕೈಕ ಗೋಲು ಗಳಿಸಿದರು.

ADVERTISEMENT

ಈ ಜಯದೊಂದಿಗೆ ಮುಂಬೈ ತಂಡ ಸತತ ಎಂಟು ಪಂದ್ಯಗಳಲ್ಲಿ ಅಜೇಯವಾಗಿ ಉಳಿಯಿತು. ಇವುಗಳ ಪೈಕಿ ಆರು ಪಂದ್ಯಗಳನ್ನು ಗೆದ್ದಿದೆ.

ಸುದೀರ್ಘ ಬಿಡುವು: ಲೀಗ್‌ಗೆ ಇನ್ನು ಒಂದೂವರೆ ತಿಂಗಳ ಸುದೀರ್ಘ ಬಿಡುವು. ಜನವರಿ ಐದರಿಂದ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ವಿವಿಧ ದೇಶಗಳ ಆಟಗಾರರು ಆಡಲು ಅನುಕೂಲ ಆಗುವಂತೆ ಲೀಗ್‌ ಸ್ಥಗಿತಗೊಳಿಸಲಾಗಿದೆ.

‘ಎ’ ಗುಂಪಿನಲ್ಲಿರುವ ಭಾರತ ತಂಡದ ಮೊದಲ ಪಂದ್ಯ ಜನವರಿ ಆರರಂದು ಅಬು ಧಾಬಿಯಲ್ಲಿ ನಡೆಯಲಿದ್ದು ಥಾಯ್ಲೆಂಡ್‌
ತಂಡವನ್ನು ಎದುರಿಸಲಿದೆ. ಫೈನಲ್‌ ಪಂದ್ಯ ಫೆಬ್ರುವರಿ ಒಂದರಂದು ನಡೆಯಲಿದೆ. ನಂತರವಷ್ಟೇ ಐಎಸ್‌ಎಲ್‌ನ ಮುಂದಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್‌ 29ರಂದು ಆರಂಭಗೊಂಡ ಲೀಗ್‌ನಲ್ಲಿ ಈ ವರೆಗೆ 29 ಪಂದ್ಯಗಳು ನಡೆದಿವೆ. 11 ಪಂದ್ಯಗಳಲ್ಲಿ 27 ಪಾಯಿಂಟ್ ಗಳಿಸಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ಪಾಯಿಂಟ್ ಪಟ್ಟಿಯ ಮೊದಲ ಸ್ಥಾನದಲ್ಲಿದೆ. 12 ಪಂದ್ಯಗಳ ಪೈಕಿ ಒಂದನ್ನು ಮಾತ್ರ ಗೆದ್ದಿರುವ ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ಕೊನೆಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.