ADVERTISEMENT

ಚೆನ್ನೈನಲ್ಲಿ ಅಂತರ ರಾಜ್ಯ ಅಥ್ಲೆಟಿಕ್ಸ್ ಆರಂಭ

ಪಿಟಿಐ
Published 19 ಆಗಸ್ಟ್ 2025, 19:57 IST
Last Updated 19 ಆಗಸ್ಟ್ 2025, 19:57 IST
ಅನಿಮೇಶ್ ಕುಜೂರ್
ಅನಿಮೇಶ್ ಕುಜೂರ್   

ಚೆನ್ನೈ: ಲಾಂಗ್‌ಜಂಪ್‌ ತಾರೆ ಮುರಳಿ ಶ್ರೀಶಂಕರ್, ಸ್ಟ್ರಿಂಟರ್‌ ಅನಿಮೇಶ್ ಕುಜೂರ್ ಮತ್ತು ಜಾವೆಲಿನ್ ಥ್ರೋಪಟು ಅನ್ನುರಾಣಿ ಅವರು ಬುಧವಾರ ಇಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಐದು ದಿನ ನಡೆಯುವ ಈ ಕೂಟವು ಮುಂದಿನ ತಿಂಗಳು ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಲು ಕೊನೆಯ ವೇದಿಕೆಯಾಗಿದೆ. ಸೆ.13ರಿಂದ 21 ರವರೆಗೆ ಟೋಕಿಯೊದಲ್ಲಿ ನಡೆಯಲಿರುವ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಸಂಪಾದಿಸಲು ಇದೇ 24 ಕೊನೆಯ ದಿನವಾಗಿದೆ.

ಈ ಕೂಟದಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ, ಸ್ಟೀಪಲ್‌ಚೇಸರ್‌ಗಳಾದ ಅವಿನಾಶ್ ಸಾಬ್ಳೆ ಮತ್ತು ಪಾರುಲ್ ಚೌಧರಿ, ಹರ್ಡಲ್ಸ್‌ ಓಟಗಾರ್ತಿ ಜ್ಯೋತಿ ಯರ್ರಾಜಿ ಮತ್ತು ದೂರ ಅಂತರದ ಓಟಗಾರ ಗುಲ್ವೀರ್ ಸಿಂಗ್ ಮುಂತಾದ ಖ್ಯಾತನಾಮ ಅಥ್ಲೀಟ್‌ಗಳು ಭಾಗವಹಿಸುತ್ತಿಲ್ಲ.

ADVERTISEMENT

ಜಾವೆಲಿನ್‌ ಥ್ರೋಪಟುಗಳಾದ ಕಿಶೋರ್‌ ಜೇನಾ, ಸಚಿನ್‌ ಯಾದವ್‌, ರೋಹಿತ್‌ ಯಾದವ್‌, ಯಶ್ವೀರ್‌ ಸಿಂಗ್‌ ಸ್ಪರ್ಧಾ ಕಣದಲ್ಲಿದ್ದಾರೆ. ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರವೀಣ್ ಚಿತ್ರವೇಲ್, ಶಟ್‌ಪಟ್ ಅಥ್ಲೀಟ್‌ ತಜಿಂದರ್‌ಪಾಲ್ ಸಿಂಗ್ ತೂರ್ ಉತ್ತಮ ಪ್ರದರ್ಶನದ ಗುರಿ ಹೊಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.