
ತುಮಕೂರಿನಲ್ಲಿ ಗುರುವಾರ ನಡೆದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಕೊಕ್ಕೊ ಪಂದ್ಯಾವಳಿಯಲ್ಲಿ ಬೆಂಗಳೂರು ನಗರ ತಂಡ ಗೆಲುವು ಸಾಧಿಸಿತು.
ತುಮಕೂರು: ನಗರದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗುರುವಾರ ಸಂಜೆ ತೆರೆ ಬಿತ್ತು. ಕೊನೆಯ ದಿನ ನಡೆದ ಕೊಕ್ಕೊ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ, ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ ಚಿನ್ನದ ಪದಕ ಪಡೆದವು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಂಗಳೂರು ನಗರ ತಂಡ 18-15 ಅಂಕಗಳಿಂದ ದಕ್ಷಿಣ ಕನ್ನಡ ತಂಡವನ್ನು ಸೋಲಿಸಿತು.
ಮಹಿಳೆಯರ ಅಂತಿಮ ಪಂದ್ಯದಲ್ಲಿ ಮೈಸೂರು ತಂಡವು ಇನ್ನಿಂಗ್ಸ್ ಹಾಗೂ 3 ಪಾಯಿಂಟ್ಸ್‌ಗಳಿಂದ ಬೆಂಗಳೂರು ನಗರ ತಂಡದ ವಿರುದ್ಧ ಗೆಲುವು ದಾಖಲಿಸಿತು. ಮೈಸೂರು ತಂಡ ಟೂರ್ನಿಯ ಆರಂಭದಿಂದಲೇ ಗಮನ ಸೆಳೆದಿತ್ತು.
ಕಳೆದ ವರ್ಷ ನಡೆದ ಕೊಕ್ಕೊ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಆಟಗಾರ್ತಿ ಚೈತ್ರಾ ಅವರು ಮೈಸೂರು ತಂಡವನ್ನು ಪ್ರತಿನಿಧಿಸಿದ್ದರು. ತಂಡದ ಇತರ ಆಟಗಾರರು ಭರವಸೆ ಮೂಡಿಸಿದ್ದರು. ಕೊನೆಗೂ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಗೆ ಪ್ರಶಸ್ತಿ: ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಮುಕ್ತಾಯವಾದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೊದಲಾರ್ಧದಲ್ಲಿ ಬೆಳಗಾವಿ ಮತ್ತು ಮೈಸೂರು ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ನಿಗದಿತ ಸಮಯದಲ್ಲಿ ಪಂದ್ಯ 2-2 ಸಮಬಲಗೊಂಡಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಬೆಳಗಾವಿ ತಂಡ ಜಯ ಸಾಧಿಸಿತು. 5-3 ಗೋಲುಗಳಿಂದ ಮೈಸೂರು ತಂಡಕ್ಕೆ ಸೋಲುಣಿಸಿತು. ಫೈನಲ್ ಪಂದ್ಯ ಕೊನೆಯ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.
ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದವು. ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ತಂಡ 39-27ರಿಂದ ಬೆಂಗಳೂರು ನಗರ ತಂಡವನ್ನು ಪರಾಭವಗೊಳಿಸಿತು. ತುಮಕೂರಿನ ಮಹಿಳೆಯರು 25-20 ಅಂಕಗಳಿಂದ ಹಾಸನ ತಂಡವನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.