
ದೋಹಾ: ಭಾರತದ ಶೂಟರ್‌ಗಳಾದ ಸುರುಚಿ ಸಿಂಗ್ ಮತ್ತು ಸೈನ್ಯಮ್ ಅವರು ಇಲ್ಲಿ ಶನಿವಾರ ಆರಂಭವಾದ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರಿಗೆ ಪ್ರಬಲ ಪೈಪೋಟಿ ನೀಡಿದ ಸ್ವದೇಶದ ವರುಣ್ ತೋಮರ್ ನಾಲ್ಕನೇ ಸ್ಥಾನ ಪಡೆದರು.
ದಿನದ ಆರಂಭದಲ್ಲಿ 10 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು ನಿರಾಸೆ ಮೂಡಿಸಿದರು. ಆದರೆ, ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸುರುಚಿ 245.1 ಅಂಕಗಳನ್ನು ಗಳಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನ ದೊರಕಿಸಿಕೊಟ್ಟರು. ವಿಶ್ವ ಜೂನಿಯರ್ ಮಾಜಿ ಚಾಂಪಿಯನ್ ಸೈನ್ಯಮ್ 243.3 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು.
ಫೈನಲ್‌ಗೆ ತಲುಪಿದ್ದ ಒಲಿಂಪಿಕ್ ಅವಳಿ ಕಂಚಿನ ಪದಕ ವಿಜೇತೆ ಮನು ಭಾಕರ್ 179.2 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು.
ಈ ವರ್ಷದ ಆರಂಭದಲ್ಲಿ ಸತತ ನಾಲ್ಕು ವಿಶ್ವಕಪ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಸುರುಚಿ ಅವರು ಅಕ್ಟೋಬರ್‌ನಲ್ಲಿ ವಿಶ್ವದ ನಂ.1 ಸ್ಥಾನಕ್ಕೆ ಏರಿದ್ದರು. 12 ಶೂಟರ್‌ಗಳ ಪೈಕಿ ಅರ್ಹತಾ ಸುತ್ತಿನಲ್ಲಿ 586 ಅಂಕ ಗಳಿಸಿ ಎರಡನೇ ಸ್ಥಾನದೊಂದಿಗೆ ಫೈನಲ್ ತಲುಪಿದ್ದರು. ಮನು (578) ಆರನೇ ಸ್ಥಾನ ಮತ್ತು ಸೈನ್ಯಮ್ (573) ಎಂಟನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು.
ಈಚೆಗೆ ಕೈರೋದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಸಾಮ್ರಾಟ್ ಚಿನ್ನದ ನಿರೀಕ್ಷೆಯಲ್ಲಿದ್ದರು. ಆದರೆ, ಅವರು ಲಯ ಕಂಡುಕೊಳ್ಳುವಲ್ಲಿ ಎಡವಿದರು. ಮೂರನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.