ಯಲಹಂಕ: ‘ಯಶಸ್ವಿ ಕ್ರೀಡಾಪಟುವಿನ ಬದುಕಿನಲ್ಲಿ ಶಿಕ್ಷಣವೂ ಬಹಳ ಮುಖ್ಯ. ಶಿಕ್ಷಣ ಮತ್ತು ಕ್ರೀಡೆ ಪರಸ್ಪರ ಸಮಾನಾಂತರವಾಗಿ ಸಾಗಬೇಕು’ ಎಂದು ಭಾರತದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.
ಕ್ರೀಡಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆ ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಉದ್ದೇಶದಿಂದ ಒಪ್ಪಂದ ವಿನಿಮಯ ಪತ್ರಕ್ಕೆ ಸೋಮವಾರ ಸಹಿ ಹಾಕಿದವು.
‘15 ವರ್ಷಗಳ ಹಿಂದೆ ಟೆನ್ವಿಕ್ ಸ್ಪೋಟ್ಸ್ ಸ್ಥಾಪನೆಯಾದಂದಿನಿಂದ ಶಿಕ್ಷಣ ಮತ್ತು ಕ್ರೀಡೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ನನ್ನ ಕನಸಾಗಿತ್ತು. ಮಾಹೆ ಜೊತೆಗಿನ ನಮ್ಮ ಒಪ್ಪಂದದಿಂದ ಆ ಕನಸು ಸಾಕಾರಗೊಳ್ಳುತ್ತಿದೆ’ ಎಂದು ಟೆನ್ವಿಕ್ ಸ್ಪೋರ್ಟ್ಸ್‌ನ ಸ್ಥಾಪಕರೂ ಆಗಿರುವ ಕುಂಬ್ಳೆ ಹೇಳಿದರು.
‘ಮಾಹೆ ಜೊತೆಗಿನ ನಮ್ಮ ಒಪ್ಪಂದವು ಕ್ರೀಡಾ ತರಬೇತಿ, ತಂತ್ರಜ್ಞಾನ, ವಿಜ್ಞಾನ ಮತ್ತು ನಿರ್ವಹಣೆ ವಿಭಾಗದಲ್ಲಿ ಭಾರತೀಯ ಪ್ರತಿಭೆಗಳನ್ನು ಬೆಳೆಸುವ ಕಾರ್ಯಕ್ಕೆ ಉತ್ತೇಜನ ನೀಡಲಿದೆ. ಈ ಮೂಲಕ ಜಾಗತಿಕ ಕ್ರೀಡಾಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿದೆ’ ಎಂದು ಟೆನ್ವಿಕ್ ಸ್ಪೋರ್ಟ್ಸ್‌ನ ಸಹ ಸಂಸ್ಥಾಪಕ, ಮಾಜಿ ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ವಸಂತ ಭಾರದ್ವಾಜ್ ಹೇಳಿದರು.
‘ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿವು ಸುಮಾರು ₹300 ಕೋಟಿಯ ಅತ್ಯಾಧುನಿಕ ಕ್ರೀಡಾಸೌಕರ್ಯಗಳನ್ನು ಒಳಗೊಂಡಿದೆ. ₹15 ಕೋಟಿ ವೆಚ್ಚದಲ್ಲಿ ನೂತನ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ’ ಎಂದು ಅಕಾಡೆಮಿ ಕುಲಪತಿ ಡಾ.ವೆಂಕಟೇಶ್ ತಿಳಿಸಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹ ಕುಲಪತಿ ಡಾ.ಮಧು ವೀರರಾಘವನ್, ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.