ADVERTISEMENT

Tokyo Olympics: ನೂರರಲ್ಲಿ ಮೂರೂ ಗೆದ್ದ ಜಮೈಕ

ಎಲೈನ್ ಥಾಮ್ಸನ್ ವೇಗದ ಮಹಿಳೆ: ಶೆಲ್ಲಿ ಆ್ಯನ್ ಫ್ರೇಸರ್, ಶೆರಿಕಾ ಜಾನ್ಸನ್‌ಗೆ ಪದಕ

ರಾಯಿಟರ್ಸ್
Published 31 ಜುಲೈ 2021, 19:45 IST
Last Updated 31 ಜುಲೈ 2021, 19:45 IST
ಅಂತಿಮ ಗೆರೆಯ ಬಳಿ ಸಂಭ್ರಮಿಸಿದ ಎಲೈನ್ ಥಾಮ್ಸನ್ ಹೆರಾ –ರಾಯಿಟರ್ಸ್ ಚಿತ್ರ
ಅಂತಿಮ ಗೆರೆಯ ಬಳಿ ಸಂಭ್ರಮಿಸಿದ ಎಲೈನ್ ಥಾಮ್ಸನ್ ಹೆರಾ –ರಾಯಿಟರ್ಸ್ ಚಿತ್ರ   

ಟೋಕಿಯೊ: ಟ್ರ್ಯಾಕ್‌ನಲ್ಲಿ ತನ್ನ ಶಕ್ತಿ ಏನೆಂದು ಜಮೈಕಾ ಮತ್ತೊಮ್ಮೆ ಸಾಬೀತು ಮಾಡಿತು. ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಆ ದೇಶದ ಅಥ್ಲೀಟ್‌ಗಳು ಪದಕಗಳನ್ನು ಕ್ಲೀನ್‌ ಸ್ವೀಪ್ ಮಾಡಿದರು.

ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದ ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್ ಅವರನ್ನು ಹಿಂದಿಕ್ಕಿ ಹಾಲಿ ಚಾಂಪಿಯನ್‌ ಎಲೈನ್ ಥಾಮ್ಸನ್ ಹೆರಾ ಚಿನ್ನದ ಪದಕ ಕೊರಳಿಗೆ ಹಾಕಿಕೊಂಡರು. ಶೆಲ್ಲಿ ಬೆಳ್ಳಿ ಗೆದ್ದರೆಶೆರಿಕಾ ಜಾನ್ಸನ್‌ ಕಂಚಿನ ಪದಕ ಗೆದ್ದುಕೊಂಡರು.ಎಲೈನ್ ಥಾಮ್ಸನ್10.61 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ ದಾಖಲೆ ಬರೆದರೆ 10.76 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಶೆರಿಕಾ ವೈಯಕ್ತಿಕ ಸಾಮರ್ಥ್ಯವನ್ನು ಉತ್ತಮಪಡಿಸಿಕೊಂಡರು. ಶೆಲ್ಲಿ 10.74 ಸೆಕೆಂಡುಗಳ ಸಾಧನೆ ಮಾಡಿದರು.

ನಾಲ್ಕನೇ ಲೇನ್‌ನಲ್ಲಿ ಓಡಿದ ಎಲೈನ್ ಥಾಮ್ಸನ್ ಮತ್ತು ಐದನೇ ಲೇನ್‌ನಲ್ಲಿದ್ದ ಶೆಲ್ಲಿ ನಡುವೆ ಆರಂಭದಲ್ಲೇ ಭಾರಿ ಪೈಪೋಟಿ ಕಂಡುಬಂತು. ಆರಂಭದಲ್ಲಿ ಶೆಲ್ಲಿ ಮುನ್ನಡೆ ಸಾಧಿಸಿದ್ದರು. 50 ಮೀಟರ್ ದಾಟಿದ ನಂತರ ವೇಗ ಹೆಚ್ಚಿಸಿಕೊಂಡರು. ಅಂತಿಮ ಗೆರೆ ದಾಟುತ್ತಿದ್ದಂತೆ ಎಡಗೈ ಎತ್ತಿ ಸಂಭ್ರಮ ಆಚರಿಸಿದರು.

ADVERTISEMENT

ಎಲೈನ್ ಥಾಮ್ಸನ್ ವಿಶ್ವ ಕಂಡ ಎರಡನೇ ಅತಿ ವೇಗದ ಮಹಿಳೆ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಅಮೆರಿಕದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅತಿವೇಗದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ. ಇಂಡಿಯಾನಪೊಲಿಸ್‌ನಲ್ಲಿ 1988ರಲ್ಲಿ ನಡೆದ ಕ್ರೀಡಾಕೂಟದಲ್ಲಿ 10.49 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಅವರು ವಿಶ್ವ ದಾಖಲೆ ಬರೆದಿದ್ದರು.

4x400 ಮೀಟರ್ಸ್ ಮಿಶ್ರ ರಿಲೆಯ ಚಿನ್ನದ ಪದಕ ಪೋಲೆಂಡ್ ಪಾಲಾಯಿತು. ಡೊಮಿನಿಕ, ಕಾರ್ನಿಲಾ, ಪ್ಯಾಟ್ರಿಕ್ ಮತ್ತು ಜಾಕೂಬ್ ಅವರನ್ನೊಳಗೊಂಡ ತಂಡ3 ನಿಮಿಷ 9.87 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಡೊಮಿನಿಕನ್ ರಿಪಬ್ಲಿಕ್ ಮತ್ತು ಅಮೆರಿಕ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು.

ಡಿಸ್ಕಸ್‌ ಥ್ರೋ: ಸ್ಟಾಹ್ಲ್‌ಗೆ ಚಿನ್ನ

ಸ್ವೀಡನ್‌ನ ಡ್ಯಾನಿಯಲ್ ಸ್ಟಾಹ್ಲ್ ಪುರುಷರ ಡಿಸ್ಕಸ್‌ ಥ್ರೋದಲ್ಲಿ ಚಿನ್ನದ ಪದಕ ಗಳಿಸಿದರು. 68.90 ಮೀಟರ್‌ಗಳ ಸಾಧನೆ ಮಾಡಿದ ಅವರು ತಮ್ಮದೇ ದೇಶದ ಸೈಮನ್ ಪೆಟರ್ಸನ್ (67.39 ಮೀ) ಅವರನ್ನು ಹಿಂದಿಕ್ಕಿದರು. ಆಸ್ಟ್ರಿಯಾದ ಲೂಕಾಸ್ ವೈಶಾನಿಗರ್ (67.07 ಮೀ) ಕಂಚಿನ ಪದಕ ಗೆದ್ದುಕೊಂಡರು.

100 ಮೀ: ಒಲಿಂಪಿಕ್‌ ದಾಖಲೆ

ಎಲೈನ್ ಥಾಮ್ಸನ್ ಹೆರಾ (ಜಮೈಕ)

10.61 ಸೆಕೆಂಡು

(2020ರ ಒಲಿಂಪಿಕ್ಸ್‌, ಟೋಕಿಯೊ)

ಹಿಂದಿನ ದಾಖಲೆ

ಫ್ಲಾರೆನ್ಸ್ ಗ್ರಿಫಿತ್ (ಅಮೆರಿಕ)

10.62 ಸೆಕೆಂಡು

(1988ರ ಒಲಿಂಪಿಕ್ಸ್‌, ಸೋಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.