ಟೋಕಿಯೊ: ಕೊರೊನಾ ವೈರಾಣು ಹಾವಳಿ ಮುಂದುವರಿದರೆ ಮುಂದಿನ ವರ್ಷವೂ ಟೋಕಿಯೊ ಒಲಿಂಪಿಕ್ಸ್ ಆಯೋಜಿಸಲು ಸಾಧ್ಯವೇ ಇಲ್ಲ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.
ಜಪಾನ್ ಸಂಸತ್ತಿನಲ್ಲಿ ಬುಧವಾರ ನಡೆದ ಬಜೆಟ್ ಸಮಿತಿಯ ಅಧಿವೇಶನದಲ್ಲಿ ಅವರು ವಿರೋಧ ಪಕ್ಷದವರ ಪ್ರಶ್ನೆಗೆ ಉತ್ತರಿಸಿದರು.
ಪ್ರಪಂಚವನ್ನು ಕೊರೊನಾ ವೈರಾಣು ನಡುಗಿಸುತ್ತಿದ್ದಂತೆ ಒಲಿಂಪಿಕ್ ಕೂಟವನ್ನು ಮುಂದಿನ ವರ್ಷದ ಜುಲೈ ತಿಂಗಳಿಗೆ ಮುಂದೂಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರ್ಕಾರ ಕಳೆದ ತಿಂಗಳು ನಿರ್ಧರಿಸಿತ್ತು. ಆದರೆ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದ್ದು ಈ ಮಹಾಮಾರಿಗೆ ಲಸಿಕೆ ಕಂಡುಹಿಡಿಯಲು ಇನ್ನೂ ಬಹಳಷ್ಟು ಕಾಲ ಬೇಕಾದೀತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಕೂಟವನ್ನು ಮತ್ತೊಮ್ಮೆ ಮುಂದೂಡುವ ಲಕ್ಷಣಗಳು ಕಾಣಿಸಿಕೊಂಡಿವೆ.
‘ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಕೂಟವನ್ನು ಆಯೋಜಿಸುವುದಾದರೆ ಅದು ಪೂರ್ಣ ಪ್ರಮಾಣದಲ್ಲಿರಬೇಕು ಎಂಬುದು ನಮ್ಮೆಲ್ಲರ ಆಶಯ. ಕೂಟದಲ್ಲಿ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರು ನಿರಾತಂಕವಾಗಿ ಪಾಲ್ಗೊಳ್ಳುವಂತಹ ವಾತಾವರಣ ಇರಬೇಕು. ಕೊರೊನಾ ವೈರಾಣು ಇದೆ ಎಂದಾದರೆ ಇದು ಸಾಧ್ಯವಿಲ್ಲ’ ಎಂದು ಅಬೆ ಹೇಳಿದ್ದಾರೆ.
‘ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಹಾವಳಿಯನ್ನು ಇಲ್ಲದೆ ಮಾಡಲು ಸಮರೋಪಾದಿಯಲ್ಲಿ ಕೆಲಸಗಳು ಆಗಬೇಕು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿ ಮತ್ತು ಸ್ಥಳೀಯ ಸರ್ಕಾರದ ಜೊತೆ ನಿರಂತರ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಒಲಿಂಪಿಕ್ಸ್ ನಡೆದರೂ ಅಲ್ಲಿ ಕೊರೊನಾವನ್ನು ಗೆದ್ದ ಸಂಭ್ರಮವೂ ಇರಬೇಕು. ಕೊರೊನಾದೊಂದಿಗೇ ಕೂಟವನ್ನು ಆಯೋಜಿಸುವುದು ಕಷ್ಟ ಸಾಧ್ಯ’ ಎಂದು ಅಬೆ ಹೇಳಿದರು.
ಅಧಿಕೃತ ವರದಿಗಳ ಪ್ರಕಾರ ಟೋಕಿಯೊದಲ್ಲಿ ಮಂಗಳವಾರ 112 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಜಪಾನ್‌ನಲ್ಲಿ ಒಟ್ಟಾರೆ 13,895 ಮಂದಿ ಸೋಂಕಿಗೆ ಒಳಗಾಗಿದ್ದಾರೆ. 413 ಮಂದಿ ಸಾವಿಗೀಡಾಗಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಆದರೆ ಜಪಾನ್‌ನಲ್ಲಿ ಸೋಂಕು ಪರೀಕ್ಷೆಗಳು ತೀರಾ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.