ADVERTISEMENT

Tokyo Olympics: ಫೆನ್ಸಿಂಗ್‌: ಗೆದ್ದು ಸೋತ ಭವಾನಿ ದೇವಿ

ಪಿಟಿಐ
Published 26 ಜುಲೈ 2021, 19:02 IST
Last Updated 26 ಜುಲೈ 2021, 19:02 IST
ಭವಾನಿ ದೇವಿ (ಬಲಭಾಗದಲ್ಲಿ)
ಭವಾನಿ ದೇವಿ (ಬಲಭಾಗದಲ್ಲಿ)   

ಟೋಕಿಯೊ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದ ಭಾರತದ ಮೊದಲ ಫೆನ್ಸಿಂಗ್ ಪಟು ಎಂಬ ದಾಖಲೆ ಬರೆದಿದ್ದ ಸಿ.ಎ.ಭವಾನಿ ದೇವಿ, ಟೋಕಿಯೊ ಕೂಟದ ಎರಡನೇ ಸುತ್ತಿನಲ್ಲಿ ಸೋಮವಾರ ನಿರಾಸೆ ಅನುಭವಿಸಿದರು. ಆದರೆ ಸ್ಪರ್ಧಿಸಿದ್ದ ಮೊದಲ ಒಲಿಂಪಿಕ್ಸ್‌ ನಲ್ಲೇ ಅವರು ತೋರಿದ ಹೋರಾಟ ಗಮನ ಸೆಳೆಯಿತು.

ಮಹಿಳೆಯರ ವೈಯಕ್ತಿಕ ಸೇವರ್ ವಿಭಾಗದಲ್ಲಿ 27 ವರ್ಷದ ಭವಾನಿ, ವಿಶ್ವದ ಮೂರನೇ ಕ್ರಮಾಂಕದ, ಫ್ರಾನ್ಸ್ ಸ್ಪರ್ಧಿ ಮನೊನ್‌ ಬ್ರೂನೆಟ್‌ ಎದುರು ಎರಡನೇ ಸುತ್ತಿನ ಪಂದ್ಯದಲ್ಲಿ 7–15ರಿಂದ ಸೋತು ಅಭಿಯಾನ ಅಂತ್ಯಗೊಳಿಸಿದರು.

ಮೊದಲ ಸುತ್ತಿನಲ್ಲಿ ಟ್ಯೂನಿಷಿಯಾದ ನಾದಿಯಾ ಬೆನ್ ಅಜೀಜಿ ಅವರನ್ನು 15–3ರಿಂದ ಪರಾಭವಗೊಳಿಸಿದ್ದ ಭವಾನಿ, ಅದೇ ಲಯವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು.

ADVERTISEMENT

ನಾದಿಯಾ ಎದುರು ತೋರಿದ ಆಕ್ರಮಣಕಾರಿ ಶೈಲಿಯು ಭವಾನಿ ಅವರಿಗೆ ಪಾಯಿಂಟ್ಸ್ ತಂದುಕೊಟ್ಟವು. ಮೊದಲ ಮೂರು ನಿಮಿಷಗಳಲ್ಲೇ 8–0ಯಿಂದ ಮುನ್ನಡೆ ಗಳಿಸಿದ್ದರು. ಅದೇ ಲಯದೊಂದಿಗೆ ಮುನ್ನುಗ್ಗಿ ಆರು ನಿಮಿಷ 14 ಸೆಕೆಂಡುಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಆದರೆ ರಿಯೊ ಒಲಿಂಪಿಕ್ಸ್ ಸೆಮಿಫೈನಲಿಸ್ಟ್ ಆಗಿದ್ದ ಬ್ರೂನೆಟ್‌ ಅನುಭವದ ಎದುರು ಭಾರತದ ಸ್ಪರ್ಧಿ ಮಂಕಾದರು.

ಒಂಬತ್ತು ನಿಮಿಷ 48 ಸೆಕೆಂಡುಗಳಲ್ಲಿ ಪಂದ್ಯವು ಬ್ರೂನೆಟ್ ಪಾಲಾಯಿತು.

ಬ್ರೂನೆಟ್‌ಗೆ ಕಂಚು: ಭವಾನಿ ದೇವಿ ಅವರನ್ನು ಮಣಿಸಿದ್ದ ಬ್ರೂನೆಟ್‌ ಮಹಿಳೆಯರ ವೈಯಕ್ತಿಕ ಸೇಬರ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಪದಕದ ಸುತ್ತಿನಲ್ಲಿ ಅವರು 15–7ರಿಂದ ಹಂಗರಿಯ ಆ್ಯನಾ ಮಾರ್ಟನ್ ಅವರನ್ನು ಪರಾಭವಗೊಳಿಸಿದರು.

ಈ ವಿಭಾಗದ ಚಿನ್ನದ ಪದಕವು ರಷ್ಯಾದ ಸೋಫಿಯಾ ಪೊಜ್‌ನಿಯಾಕವ ಅವರ ಪಾಲಾಯಿತು. ಅದೇ ತಂಡದ ಸೋಫಿಯಾ ವೆಲಿಕಾಯಾ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.

ಅಡ್ಜಸ್ಟೆಡ್‌ ಆಫಿಶೀಯಲ್ ರ‍್ಯಾಂಕಿಂಗ್ (ಎಒಆರ್‌) ಆಧಾರದಲ್ಲಿ ಟೋಕಿಯೊ ಟಿಕೆಟ್‌ ಗಿಟ್ಟಿಸಿದ್ದ ತಮಿಳುನಾಡಿನ ಭವಾನಿ ಅವರು ಎಂಟು ಬಾರಿ ರಾಷ್ಟ್ರೀಯ ಚಾಂಪಿ
ಯನ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.