ADVERTISEMENT

Tokyo Olympics | ಹಾಕಿ: ಮೋಡಿ ಮಾಡಿದ ಸಿಂಗ್ ಜೋಡಿ- ಭಾರತಕ್ಕೆ 3-0 ಅಂತರದ ಜಯ

ಮೋಡಿ ಮಾಡಿದ ಸಿಂಗ್ ಜೋಡಿ

ಪಿಟಿಐ
Published 27 ಜುಲೈ 2021, 18:11 IST
Last Updated 27 ಜುಲೈ 2021, 18:11 IST
ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ 3-0 ಅಂತರದ ಜಯ
ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ 3-0 ಅಂತರದ ಜಯ   

ಟೋಕಿಯೊ: ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಭಾರಿ ಅಂತರದ ಸೋಲಿನಿಂದ ಕಂಗೆಟ್ಟಿದ ಭಾರತ ಪುರುಷರ ಹಾಕಿ ತಂಡ ಪುಟಿದೆದ್ದು ಮಂಗಳವಾರ ಗೆಲುವಿನ ಲಯಕ್ಕೆ ಮರಳಿತು. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತ 3–0ಯಿಂದ ಜಯ ಗಳಿಸಿತು.

ಡ್ರ್ಯಾಗ್‌ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಅವರ ಎರಡು ಗೋಲುಗಳು ಮತ್ತು ಸಿಮ್ರನ್‌ಜೀತ್ ಸಿಂಗ್‌ ಗಳಿಸಿದ ಒಂದು ಗೋಲು ತಂಡ ಮೇಲುಗೈ ಸಾಧಿಸಲು ಕಾರಣವಾಯಿತು. ಇದರೊಂದಿಗೆ ಮನ್‌ಪ್ರೀತ್ ಸಿಂಗ್ ಬಳಗದ ಕ್ವಾರ್ಟರ್ ಫೈನಲ್ ಫೈನಲ್ ಕನಸಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ, ಒಂಬತ್ತನೇ ಸ್ಥಾನದಲ್ಲಿರುವ ಸ್ಪೇನ್‌ಗೆ ಒಯಿ ಹಾಕಿ ಕ್ರೀಡಾಂಗಣದಲ್ಲಿ 14ನೇ ನಿಮಿಷದಲ್ಲೇ ಆಘಾತ ನೀಡಿತು. ಸಿಮ್ರನ್‌ಜೀತ್ ಸಿಂಗ್‌ ತಂದುಕೊಟ್ಟ ಗೋಲು ತಂಡದ ಮುನ್ನಡೆಗೆ ಕಾರಣವಾಯಿತು. ರೂಪಿಂದರ್ ಪಾಲ್ ಸಿಂಗ್ 15 ಮತ್ತು 51ನೇ ನಿಮಿಷಗಳಲ್ಲಿ ಚೆಂಡನ್ನು ಗುರಿಮುಟ್ಟಿಸಿ ಎದುರಾಳಿಗಳ ಆಸೆಗೆ ತಣ್ಣೀರು ಹಾಕಿದರು. ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಜೊತೆ 1–1ರ ಡ್ರಾ ಸಾಧಿಸಿದ್ದ ಸ್ಪೇನ್‌ ನಂತರ ನ್ಯೂಜಿಲೆಂಡ್‌ಗೆ 3–4ರಲ್ಲಿ ಮಣಿದಿತ್ತು.

ADVERTISEMENT

ಆರಂಭದಲ್ಲಿ ಉಭಯ ತಂಡದವರು ಜಿದ್ದಾಜಿದ್ದಿಯ ಹೋರಾಟ ನಡೆಸಿದರು. ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಲು ವಿಫಲವಾದರೂ ಭಾರತ ಮೊದಲ 10 ನಿಮಿಷಗಳಲ್ಲಿ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಒಂಬತ್ತನೇ ನಿಮಿಷದಲ್ಲಿ ಮನ್‌ಪ್ರೀತ್ ಸಿಂಗ್ ಅವರ ಪಾಸ್‌ನಲ್ಲಿ ಸಿಮ್ರನ್‌ಜೀತ್‌ ಸಿಂಗ್ ಗೋಲುಪೆಟ್ಟಿಗೆಯತ್ತ ಚೆಂಡನ್ನು ಹೊಡೆದಿದ್ದರು. ಆದರೆ ಅದು ಹೊರಗೆ ಚಿಮ್ಮಿತು. 12ನೇ ನಿಮಿಷದಲ್ಲಿ ಸ್ಪೇನ್‌ಗೆ ಪೆನಾಲ್ಟಿ ಕಾರ್ನರ್ ಲಭಿಸಿತು.

ಮೊದಲ ಕ್ವಾರ್ಟರ್‌ನ ಮುಕ್ತಾಯಕ್ಕೆ ನಿಮಿಷಗಳು ಬಾಕಿ ಇರುವಾಗ ಭಾರತ ಪ್ರಬಲ ಆಕ್ರಮಣಕ್ಕೆ ಮುಂದಾಯಿತು. ಅಮಿತ್ ರೋಹಿದಾಸ್ ನೀಡಿದ ಪಾಸ್‌ನಲ್ಲಿ ಸಿಮ್ರನ್‌ಜೀತ್ ಸಿಂಗ್ ಸುಲಭ ಗೋಲು ಗಳಿಸಿದರು. ಕೊನೆಯ ನಿಮಿಷದಲ್ಲಿ ತಂಡಕ್ಕೆ ಸತತ ಮೂರು ಪೆನಾಲ್ಟಿ ಕಾರ್ನರ್‌ಗಳು ಸಿಕ್ಕಿದವರು. ಕೊನೆಯ ಅವಕಾಶದಲ್ಲಿ ರೂಪಿಂದರ್ ಪಾಲ್‌ ಸಿಂಗ್ ಯಶಸ್ಸು ಕಂಡರು.

ಮೂರನೇ ಕ್ವಾರ್ಟರ್‌ನಲ್ಲಿ ಸ್ಪೇನ್‌ ಆಕ್ರಮಣವನ್ನು ಹೆಚ್ಚಿಸಿತು. ಆದರೆ ಚಾಣಾಕ್ಷ ಆಟದ ಮೂಲಕ ಗೋಲ್‌ಕೀಪರ್ ಶ್ರೀಜೇಶ್ ಭಾರತದ ರಕ್ಷಣೆಗೆ ನಿಂತರು. ಕೊನೆಯ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪಂದ್ಯದ ನಾಲ್ಕನೇ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ನೆಲಮಟ್ಟದಲ್ಲಿ ಚೆಂಡನ್ನು ಫ್ಲಿಕ್ ಮಾಡಿದ ರೂಪಿಂದರ್‌ ಪಾಲ್‌ ಎದುರಾಳಿ ಗೋಲ್‌ಕೀಪರ್‌ಗೆ ಚಳ್ಳೆಹಣ್ಣು ತಿನ್ನಿಸಿದರು.

0–3ರ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಕೊನೆಯ ಹಂತದ ಪ್ರಯತ್ನ ನಡೆಸಿದ ಸ್ಪೇನ್‌ಗೆ 53ನೇ ನಿಮಿಷದಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಶ್ರೀಜೇಶ್ ಅವರ ಗೋಡೆ ಕೆಡವಿ ಮುನ್ನಡೆ ಗಳಿಸಲು ಸಾಧ್ಯವಾಗಲಿಲ್ಲ.

ಗೋಲು ಗಳಿಸಿದವರು

ಸಿಮ್ರನ್‌ಜೀತ್ ಸಿಂಗ್ (14ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್ (15, 51ನೇ ನಿ)

ಎ ಗುಂಪಿನ ಇತರ ಪಂದ್ಯಗಳು

ಸೆಣಸಿದ ತಂಡಗಳು;ಫಲಿತಾಂಶ;ಅಂತರ

ಆಸ್ಟ್ರೇಲಿಯಾ–ಅರ್ಜೆಂಟೀನಾ;ಆಸ್ಟ್ರೇಲಿಯಾಗೆ ಜಯ;5–2

ಜಪಾನ್‌–ನ್ಯೂಜಿಲೆಂಡ್‌;ಪಂದ್ಯ ಡ್ರಾ;2–2

ಸ್ಪೇನ್ ವಿರುದ್ಧದ ಫಲಿತಾಂಶ ಖುಷಿ ತಂದಿದೆ. ಆದರೆ ತಂಡದಲ್ಲಿ ಸುಧಾರಣೆ ಕಾಣಬೇಕಾದ ಅಂಶಗಳು ಸಾಕಷ್ಟು ಇವೆ. ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಡುತ್ತಿರುವುದು ಸದ್ಯ ತಂಡಕ್ಕೆ ತಲೆನೋವಾಗಿ ಕಾಡಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಗ್ರಹಾಂ ರೀಡ್ ಭಾರತ ತಂಡದ ಕೋಚ್‌

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ತಂಡದ ರಕ್ಷಣಾ ವಿಭಾಗದ ಆಟ ನಿರಾಶಾದಾಯಕವಾಗಿತ್ತು. ಸ್ಪೇನ್ ವಿರುದ್ಧ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಹಿಂದಿನ ಸೋಲನ್ನು ಮರೆತು ಜಯದ ಹಾದಿಯಲ್ಲಿ ಸಾಗಲು ಸಾಧ್ಯವಾದ್ದರಿಂದ ತಂಡದ ಆತ್ಮವಿಶ್ವಾಸ ಹೆಚ್ಚಿದೆ.

ಪಿ.ಆರ್‌.ಶ್ರೀಜೇಶ್‌ ಭಾರತ ತಂಡದ ಗೋಲ್‌ಕೀಪರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.