ADVERTISEMENT

Tokyo Olympics: ಟೇಬಲ್ ಟೆನಿಸ್- ಶರತ್‌ ಮುನ್ನಡೆ; ಮಹಿಳೆಯರ ಸವಾಲು ಅಂತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 19:16 IST
Last Updated 26 ಜುಲೈ 2021, 19:16 IST
ಮಣಿಕಾ ಬಾತ್ರಾ
ಮಣಿಕಾ ಬಾತ್ರಾ   

ಟೋಕಿಯೊ: ಆರಂಭದಲ್ಲಿ ನಿರಾಸೆ ಕಂಡ ಪಂದ್ಯದಲ್ಲಿ ನಿಧಾನವಾಗಿ ಚೇತರಿಸಿಕೊಂಡ ಅನುಭವಿ ಆಟಗಾರ ಅಚಂತ ಶರತ್ ಕಮಲ್ ಒಲಿಂಪಿಕ್ಸ್ ಟೇಬಲ್‌ ಟೆನಿಸ್‌ನ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದರು.

ಸೋಮವಾರ ನಡೆದ ಪಂದ್ಯದಲ್ಲಿ ಅವರು ಪೋರ್ಚುಗಲ್‌ನ ತಿಯಾಗೊ ‍ಪೊಲೊನಿಯಾ ಎದುರು 2-11 11-8 11-5 9-11 11-6 11-9ರಲ್ಲಿ ಗೆದ್ದರು. ಆದರೆ ಮಣಿಕಾ ಭಾತ್ರ ಮತ್ತು ಸುತೀರ್ಥ ಮುಖರ್ಜಿ ಸೋಲಿನೊಂದಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ.

ಮಣಿಕಾ ಭಾತ್ರ ಆಸ್ಟ್ರಿಯಾದ ಸೋಫಿಯಾ ಪೊಲ್ಕನೋವಗೆ 8–11, 2–11, 5–11, 7–11ರಲ್ಲಿ ಮಣಿದರೆ, ಪೋರ್ಚುಗಲ್‌ನ ‘ಹಿರಿಯ’ ಆಟಗಾರ್ತಿ ಯೂ ಫು ಅವರ ಎದುರು 3-11 3-11 5-11 5-11ರಲ್ಲಿ ಸೋತರು.

ADVERTISEMENT

39 ವರ್ಷದ ಶರತ್ ಕಮಲ್ ಮೊದಲ ಗೇಮ್‌ನಲ್ಲಿ ಕೇವಲ ಎರಡು ಪಾಯಿಂಟ್‌ಗಳನ್ನು ಗಳಿಸಿ ನಿರಾಸೆಗೆ ಒಳಗಾದರು. ಆದರೆ ನಂತರದ ಗೇಮ್‌ಗಳಲ್ಲಿ ಚೇತರಿಕೆಯ ಆಟವಾಡಿದರು. ಎದುರಾಳಿ ದಿಟ್ಟ ಹೋರಾಟ ಪ್ರದರ್ಶಿಸಿದರೂ ಎದೆಗುಂದದ ಶರತ್ ಕಮಲ್ ಎರಡು, ಮೂರು ಮತ್ತು ಐದನೇ ಗೇಮ್‌ಗಳಲ್ಲಿ ಸುಲಭ ಜಯ ಗಳಿಸಿದರೆ ನಾಲ್ಕನೇ ಗೇಮ್‌ ಕೈಚೆಲ್ಲಿದರು. ನಿರ್ಣಾಯಕ ಆರನೇ ಗೇಮ್‌ನಲ್ಲಿ ಒತ್ತಡ ಮೆಟ್ಟಿನಿಂತು ತಿಯಾಗೊ ಅವರ ಸವಾಲನ್ನು ಮೀರಿದರು. ಮುಂದಿನ ಸುತ್ತಿನಲ್ಲಿ ಅವರು ಹಾಲಿ ಚಾಂಪಿಯನ್ ಚೀನಾದ ಮಾ ಲಾಂಗ್ ಎದುರು ಕಣಕ್ಕೆ ಇಳಿಯುವರು.

ಕಂಗಾಲಾದ ಸುತೀರ್ಥ ಮುಖರ್ಜಿ

42 ವರ್ಷದ ಆಟಗಾರ್ತಿ ಯೂ ಫೂ ಅವರ ಶಕ್ತಿಶಾಲಿ ಹೊಡೆತ ಮತ್ತು ತಂತ್ರಶಾಲಿ ಆಟಕ್ಕೆ ಸುತೀರ್ಥ ಮುಖರ್ಜಿ ಕಂಗಾಲಾದರು. ಮೊದಲ ಸುತ್ತಿನಲ್ಲಿ ಲಿಂಡಾ ಬರ್ಗ್‌ಸ್ಟ್ರೋಮ್ ಎದುರು ಸೋಲಿನ ಸುಳಿಯಿಂದ ಮೇಲೆದ್ದು ಬಂದು ಗೆದ್ದಿದ್ದ ಸುತೀರ್ಥಗೆ ಎರಡನೇ ಸುತ್ತಿನ ಪಂದ್ಯದಲ್ಲಿ ಒಟ್ಟಾರೆ 16 ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಯಿತು.

ಸ್ಕೋರು ವಿವರ

ಶರತ್ ಕಮಲ್ 4 2 ತಿಯಾಗೊ

ಮಣಿಕಾ ಭಾತ್ರ 0 4 ಸೋಫಿಯಾ

ಸುತೀರ್ಥ ಮುಖರ್ಜಿ 0 4 ಯೂ ಫು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.