ADVERTISEMENT

Olympics | ಗುರಿ ತಪ್ಪಿದ ಮನು, ಬರಿಗೈಯಲ್ಲಿ ಮರಳಿದ ಭಾರತೀಯ ಪಿಸ್ತೂಲ್ ಶೂಟರ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 3:32 IST
Last Updated 30 ಜುಲೈ 2021, 3:32 IST
ಮನು ಭಾಕರ್
ಮನು ಭಾಕರ್    

ಟೋಕಿಯೊ: 19 ವರ್ಷದ ಯುವ ತಾರೆ ಮನು ಭಾಕರ್ ಹಾಗೂ ರಾಹಿ ಸರ್ನೋಬತ್ ಮಹಿಳೆಯರ ಶೂಟಿಂಗ್ ವೈಯಕ್ತಿಕ ವಿಭಾಗದಲ್ಲಿ ಗುರಿ ತಪ್ಪುವ ಮೂಲಕ ಕೂಟದಿಂದಲೇ ನಿರ್ಗಮಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 25 ಮೀಟರ್ ಪಿಸ್ತೂಲ್ ಪ್ರಿಸಿಷನ್ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಖಚಿತಪಡಿಸಿದ ಮನುಗೆ ಅದೇ ಪ್ರದರ್ಶನ ಮುಂದುವರಿಸಲು ಸಾಧ್ಯವಾಗಲಿಲ್ಲ. ರ‍್ಯಾಪಿಡ್ ಫೈರ್ ಹಂತದಲ್ಲಿ ಅಗ್ರ ಎಂಟು ಸ್ಥಾನಗಳಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುವುದರೊಂದಿಗೆ ಫೈನಲ್ ಅರ್ಹತೆಯಿಂದ ವಂಚಿತರಾದರು.

ಇದರೊಂದಿಗೆ ಸತತ ಎರಡನೇ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪಿಸ್ತೂಲ್ ಶೂಟರ್‌ಗಳು ಬರಿಗೈಯಲ್ಲಿ ಮರಳಿದ್ದಾರೆ.

ರ‍್ಯಾಪಿಡ್‌ ಸುತ್ತಿನಲ್ಲಿ 290 ಅಂಕ ಕಲೆ ಹಾಕಿದ ಮನು, ಅರ್ಹತಾ ಸುತ್ತಿನಲ್ಲಿ ಒಟ್ಟು 582 ಪಾಯಿಂಟ್ಸ್ ಗಳಿಸಿದರು. ಅತ್ತ ಪ್ರಿಸಿಷನ್ ವಿಭಾಗದಲ್ಲಿ 25ನೇ ಸ್ಥಾನ ಪಡೆದಿದ್ದ ರಾಹಿ ಸರ್ನೋಬತ್, ರ‍್ಯಾಪಿಡ್‌ ಸುತ್ತಿನಲ್ಲಿ 286 ಅಂಕ ಸೇರಿದಂತೆ ಒಟ್ಟು 573 ಪಾಯಿಂಟ್ಸ್ ಗಳಿಸಿದರು.

ಅರ್ಹತಾ ಸುತ್ತಿನಲ್ಲಿ ಒಟ್ಟು 44 ಶೂಟರ್‌ಗಳು ಭಾಗವಹಿಸಿದ್ದರು. ಆದರೆ ಭಾರತೀಯ ಶೂಟರ್‌ಗಳಿಗೆ ಪದಕ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಮನು ಭಾಕರ್, ವೈಯಕ್ತಿಕ, ಮಿಶ್ರ ತಂಡ ಸೇರಿದಂತೆ ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.