ADVERTISEMENT

Tokyo Olympics| ಟೋಕಿಯೊದಲ್ಲಿ ಅರಳಲಿದೆ ನವೋಲ್ಲಾಸದ ಜಗತ್ತು

ಪದಕಗಳ ಬೇಟೆಯಾಡಲು ಕ್ರೀಡಾಪಟುಗಳು ಸಿದ್ಧ; ಕೋವಿಡ್ ಸವಾಲಿಗೆ ಒಲಿಂಪಿಕ್ ಕ್ರೀಡಾಕೂಟದ ಸೆಡ್ಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 18:35 IST
Last Updated 22 ಜುಲೈ 2021, 18:35 IST
ಟೋಕಿಯೊ ನಗರದಲ್ಲಿ ಕಂಡ ದೃಶ್ಯ
ಟೋಕಿಯೊ ನಗರದಲ್ಲಿ ಕಂಡ ದೃಶ್ಯ    

ಟೋಕಿಯೊ: ಕೋವಿಡ್ ಪಿಡುಗಿನಿಂದ ಬಸವಳಿದಿರುವ ಮನುಕುಲಕ್ಕೆ ನವೋಲ್ಲಾಸ ತುಂಬುವ ನಿರೀಕ್ಷೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್ ಶುಕ್ರವಾರ ಆರಂಭವಾಗಲಿದೆ.

ಸಹೋದರತ್ವ, ಮಾನವೀಯತೆ ಮತ್ತು ವಿಶ್ವಬಾಂಧವ್ಯವದ ಸಂದೇಶ ಸಾರುವ ಒಲಿಂಪಿಕ್ ಕ್ರೀಡೆಗಳು ಇತಿಹಾಸವನ್ನು ನೆನಪಿಸುವುದರ ಜೊತೆಗೆ ಉಜ್ವಲ ಭವಿಷ್ಯದ ಕನಸನ್ನೂ ಬಿತ್ತುತ್ತವೆ. ಆದರೆ ಈ ಕೂಟವು ಹಿಂದಿನ ಎಲ್ಲ ಒಲಿಂಪಿಕ್ಸ್‌ಗಳಿಗಿಂತ ವಿಭಿನ್ನವಾಗಿದೆ. ಈ ಬಾರಿ ಕ್ರೀಡಾಪಟುಗಳ ಮುಂದೆ ಪದಕಗಳ ಬೇಟೆಯ ಗುರಿಯೊಂದೇ ಅಲ್ಲ. ಕಣ್ಣಿಗೆ ಕಾಣದ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಬಲ ತುಂಬುವ ಹೊಣೆಯೂ ಇದೆ. ತಮ್ಮ ಶಿಸ್ತು, ಸಾಮರ್ಥ್ಯ ಮತ್ತು ಕೌಶಲಗಳ ಮೂಲಕ ಕ್ರೀಡಾಪ್ರೇಮಿಗಳಲ್ಲಿ ನವೋಲ್ಲಾಸ ಮೂಡಿಸುವ ಅವಕಾಶವೂ ಇದೆ.

2020ರಲ್ಲಿಯೇ ಆಯೋಜನೆಗೊಳ್ಳಬೇಕಿದ್ದ ಕೂಟವು ಆರೋಗ್ಯ ತುರ್ತುಪರಿಸ್ಥಿತಿಯಿಂದಾಗಿ ಈ ವರ್ಷಕ್ಕೆ ಮುಂದೂಡಲಾಯಿತು. 206 ದೇಶಗಳಿಂದ ಈ ಕನಸಿನ ನಗರಿಗೆ ಬಂದಿಳಿದಿರುವ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಸುರಕ್ಷಿತವಾಗಿ ನೋಡಿಕೊಂಡು ಆಗಸ್ಟ್‌ 8ರಂದು ಸಂತಸದಿಂದ ಬೀಳ್ಕೊಡುವ ಸವಾಲು ಜಪಾನ್ ಸರ್ಕಾರ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ಮುಂದಿದೆ.

ADVERTISEMENT

ಇಂತಹ ಸವಾಲು ಇದೇ ಮೊದಲೆನಲ್ಲ. ಒಲಿಂಪಿಕ್ಸ್ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ರಾಜಕೀಯ, ಉಗ್ರರ ದಾಳಿ, ಜನಾಂಗೀಯ ದ್ವೇಷದ ದಳ್ಳುರಿ, ಉದ್ದೀಪನ ಮದ್ದು ಸೇವನೆಯ ಕಳಂಕ ಸೇರಿದಂತೆ ಹತ್ತಾರು ಸವಾಲುಗಳನ್ನು ಮೀರಿ ಒಲಿಂಪಿಕ್ಸ್ ಇಂದಿಗೂ ಅಚ್ಚಳಿಯದೇ ಉಳಿದಿದೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಝಿಕಾ ವೈರಸ್ ಭೀತಿ, ಭಯೋತ್ಪಾದಕರ ದಾಳಿ ಬೆದರಿಕೆಗಳು ಇದ್ದವು. ಆದರೆ, ಆಗೆಲ್ಲ ಆತಿಥೇಯ ದೇಶಗಳಿಗೆ ಸ್ಥಳೀಯರ ಬೆಂಬಲ ಹೆಚ್ಚು ಇರುತ್ತಿತ್ತು. ಈ ಬಾರಿಯದ್ದು ತದ್ವಿರುದ್ಧ. ಸ್ಥಳೀಯ ಜನರಿಂದಲೇ ಬಹಳಷ್ಟು ವಿರೋಧವನ್ನು ಸಂಘಟಕರು ಎದುರಿಸಬೇಕಾಗಿದೆ. ಜಪಾನ್‌ನಲ್ಲಿ ಪ್ರತಿದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವುದೇ ಇದಕ್ಕೆ ಕಾರಣ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿರೊಶಿಮಾ–ನಾಗಾಸಾಕಿಯ ಮೇಲಿನ ಬಾಂಬ್ ದಾಳಿಯ ಭೀಕರತೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಸುನಾಮಿ, ಭೂಕಂಪಗಳಿಂದಾದ ಹಾನಿಯನ್ನೂ ಲೆಕ್ಕಿಸದೇ ವಿಶ್ವವೇ ಕಣ್ಣುಕುಕ್ಕುವಂತೆ ಎದ್ದು ನಿಂತಿರುವ ಜಪಾನ್ ಕೋವಿಡ್ ಸವಾಲಿಗೂ ಈಗ ಎದೆಯೊಡ್ಡಿದೆ. ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿಯೇ ಕ್ರೀಡಾ ಮಹಾಮೇಳವನ್ನು ನಡೆಸಲು ಮುಂದಾಗಿದೆ. 1964ರಲ್ಲಿಯೂ ಜಪಾನ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿತ್ತು.

ಈ ಸಲದ ಕೂಟಕ್ಕಾಗಿ 2013ರಲ್ಲಿ ಬಿಡ್ ಪಡೆದುಕೊಂಡಿತ್ತು. ಜಪಾನ್ ತನ್ನ ಆಧುನಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಕೂಟವನ್ನು ವೇದಿಕೆಯಾಗಿಸಿಕೊಂಡಿದೆ. ಮನುಷ್ಯರ ಜೊತೆಗೆ ರೊಬೊಗಳು ಕೂಡ ಕಾರ್ಯಕರ್ತರಾಗಿ ಇಲ್ಲಿ ಕಾರ್ಯನಿರ್ವಹಿಸಲಿವೆ. ಕ್ರೀಡಾಪಟುಗಳ ಪ್ರಯಾಣಕ್ಕೆ ಸ್ವಯಂಚಾಲಿತ ಬ್ಯಾಟರಿ ವಾಹನಗಳು ಓಡಾಡಲಿವೆ. ಹೀಗೆ ಹತ್ತು ಹಲವು ತಂತ್ರಜ್ಞಾನ ವಿಸ್ಮಯಗಳು ಇಲ್ಲಿ ಗಮನ ಸೆಳೆಯಲಿವೆ.

ಕ್ರೀಡಾಪಟುಗಳ ನಿರೀಕ್ಷೆ: ಹೋದ ವರ್ಷವೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಿಗೆ ಒಂದು ವರ್ಷದ ಹೆಚ್ವುವರಿ ತರಬೇತಿಗೆ ಅವಕಾಶ ಲಭಿಸಿತು. ಅವರೆಲ್ಲರೂ ಈಗ ಪದಕ ಜಯದ ಕನಸು ಕಾಣುತ್ತಿದ್ದಾರೆ. ಇನ್ನೂ ಕೆಲವು ಆಟಗಾರರು ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಅರ್ಹತೆ ಗಳಿಸಿ ಟೋಕಿಯೊಗೆ ಬಂದಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಅಮೆರಿಕ 121 ಪದಕ (46 ಚಿನ್ನ, 37 ಬೆಳ್ಳಿ, 38 ಕಂಚು) ಗೆದ್ದು ಅಗ್ರಸ್ಥಾನ ಪಡೆದಿತ್ತು. ಈ ಬಾರಿಯೂ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಗ್ರೇಟ್ ಬ್ರಿಟನ್ 67 ಪದಕ ಮತ್ತು ಚೀನಾ 70 ಪದಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದವು. ತಮ್ಮ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಈ ಎರಡೂ ರಾಷ್ಟ್ರಗಳು ಪೈಪೋಟಿಗಿಳಿಯುವುದು ಖಚಿತ.

ಆದರೆ ‘ಕಪ್ಪು ಚಿರತೆ‘ ಉಸೇನ್ ಬೋಲ್ಟ್ ಅವರ ಓಟವನ್ನು ಅಸ್ವಾದಿಸುವ ಅವಕಾಶ ಈ ಬಾರಿ ಇಲ್ಲ. ಏಕೆಂದರೆ ಅವರು ಹೋದ ಸಲವೇ ನಿವೃತ್ತರಾಗಿದ್ದಾರೆ. ಅವರ ಸ್ಥಾನವನ್ನು ತುಂಬುವ ಕನಸಿನೊಂದಿಗೆ ನೊಹಾ ಲೈಲ್ಸ್‌ ಟ್ರ್ಯಾಕ್‌ಗೆ ಇಳಿಯಲಿದ್ದಾರೆ. ಅಮೆರಿಕದ 24 ವರ್ಷದ ಈ ಹುಡುಗನ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ. ಈಜುಕೊಳದ ಚಿನ್ನದ ಮೀನು ಮೈಕೆಲ್ ಪೆಲ್ಪ್ಸ್‌ ಈ ಬಾರಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುವರು. ಇವರ ಸ್ಥಾನವನ್ನು ತುಂಬುವ ನವತಾರೆಗಳು ಪ್ರವರ್ಧಮಾನಕ್ಕೆ ಬರುವ ಸಮಯ ಇದು.

ಸಾಮಾನ್ಯವಾದ ಕೌಟುಂಬಿಕ, ಆರ್ಥಿಕ ಹಿನ್ನೆಲೆಯಲ್ಲಿ ಬೆಳೆದ, ವಿಭಿನ್ನ ಧರ್ಮ, ವರ್ಣ ಮತ್ತು ರಾಷ್ಟ್ರಗಳಿಂದ ಬಂದವರೆಲ್ಲರೂ ಸೇರುವ ಏಕೈಕ ತಾಣ ಒಲಿಂಪಿಕ್ ಕೂಟ. ಇದೇ ಸಾಮಾನ್ಯ ಹಿನ್ನೆಲೆಯ ಯುವಪ್ರತಿಭೆಗಳು ದಿಗ್ಗಜರಾಗಿ ಹೊರಹೊಮ್ಮುವ ವೇದಿಕೆ ಕೂಡ ಹೌದು.

1996ರಿಂದ ನಿರಂತರ ಪದಕ ಸಾಧನೆ

1996ರಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕ ಜಯಿಸಿದ ನಂತರದ ಎಲ್ಲ ಒಲಿಂಪಿಕ್ಸ್‌ಗಳಲ್ಲಿಯೂ ಭಾರತವು ಪದಕ ಸಾಧನೆ ಮಾಡಿದೆ. 2000ನೇ ಇಸವಿಯಲ್ಲಿ ಕರ್ಣಂ ಮಲ್ಲೇಶ್ವರಿ, 2004ರ ಅಥೆನ್ಸ್‌ ನಲ್ಲಿ ರಾಜ್ಯವರ್ಧನ್ ಸಿಂಗ್ ಶೂಟಿಂಗ್‌ನಲ್ಲಿ ಪದಕ ಗೆದ್ದಿದ್ದರು. 2008ರಲ್ಲಿ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಜಯಿಸಿದ್ದರು. ಅದರೊಂದಿಗೆ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಮೊಟ್ಟಮೊದಲ ಚಿನ್ನ ಒಲಿದಿತ್ತು.

ಕುಸ್ತಿಯಲ್ಲಿ ಸುಶೀಲ್ ಕುಮಾರ್, ಬಾಕ್ಸಿಂಗ್‌ನಲ್ಲಿ ವಿಜೇಂದರ್ ಕುಮಾರ್ ಪದಕಗಳೊಂದಿಗೆ ಮರಳಿದ್ದರು.2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್, ಶೂಟಿಂಗ್‌ನಲ್ಲಿ ಗಗನ್ ನಾರಂಗ್‌, ವಿಜಯಕುಮಾರ್, ಕುಸ್ತಿಯಲ್ಲಿ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಪದಕ ಜಯಿಸಿದ್ದರು. 2016ರಲ್ಲಿ ಪಿ.ವಿ.ಸಿಂಧು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಮತ್ತು ಮಹಿಳೆಯರ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸಿದ್ದರು. ಈ ಬಾರಿಯೂ ಅದೇ ಪರಂಪರೆ ಮುಂದುವರಿಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.