ADVERTISEMENT

ಟೋಕಿಯೊ ಒಲಿಂಪಿಕ್ಸ್‌ ಟೆನಿಸ್‌: ಮಹಿಳಾ ಡಬಲ್ಸ್‌ನಲ್ಲಷ್ಟೇ ಸವಾಲು

ಭಾರತದ ಕನಸಿನ ಪಯಣ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 19:31 IST
Last Updated 14 ಜುಲೈ 2021, 19:31 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ಒಲಿಂಪಿಕ್ಸ್‌ನಲ್ಲಿ ಉತ್ತಮ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆ ಮೂಲಕ ಗಮನ ಸೆಳೆದಿದ್ದ ಭಾರತದ ಟೆನಿಸ್‌ ಸ್ಪರ್ಧಿಗಳು ಟೋಕಿಯೊ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಪಡೆಯುವಷ್ಟು ರ್‍ಯಾಂಕ್‌ ಗಳಿಸಿಲ್ಲ. ಹೀಗಾಗಿ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಚೊಚ್ಚಲ ಒಲಿಂಪಿಕ್ಸ್‌ ಆಡಲಿರುವ ಯುವ ಆಟಗಾರ್ತಿ ಅಂಕಿತಾ ರೈನಾ ಜೋಡಿ ಭಾರತದ ಸವಾಲು ಮುನ್ನೆಡಸಲಿದೆ.

1988ರ ಒಲಿಂಪಿಕ್ಸ್‌ ಬಳಿಕ ಇದೇ ಮೊದಲ ಬಾರಿ ಭಾರತ ಪುರುಷರ ತಂಡ ಡಬಲ್ಸ್‌ ವಿಭಾಗದ ಸ್ಪರ್ಧೆಯ ಅವಕಾಶ ಕಳೆದುಕೊಂಡಿದೆ. ಈ ವಿಭಾಗದಲ್ಲಿ 1992ರ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್ ಪೇಸ್‌–ರಮೇಶ್ ಕೃಷ್ಣನ್‌ ಪಾಲ್ಗೊಂಡಿದ್ದರು. ಬಳಿಕ ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಮಹೇಶ ಭೂಪತಿ–ಲಿಯಾಂಡರ್ ಪೇಸ್‌ ದೇಶವನ್ನು ಪ್ರತಿನಿಧಿಸಿದ್ದರು. 2012ರ ಲಂಡನ್‌ ಕೂಟದಲ್ಲಿ ಮಹೇಶ್‌ ಭೂಪತಿ–ರೋಹನ್‌ ಬೋಪಣ್ಣ ಹಾಗೂ ಲಿಯಾಂಡರ್‌ ಪೇಸ್‌–ವಿಷ್ಣುವರ್ಧನ ‘ಡಬಲ್‌’ ಜೋಡಿ ಪಾಲ್ಗೊಂಡಿತ್ತು. ರಿಯೊ ಡಿ ಜನೈರೊ ಕೂಟದಲ್ಲಿ ಬೋಪಣ್ಣ ಹಾಗೂ ಪೇಸ್‌ ಭಾಗವಹಿಸಿದ್ದರು.

1896ರ ಒಲಿಂಪಿಕ್ಸ್‌ನಲ್ಲಿ ಟೆನಿಸ್‌ ಪರಿಚಯಿಸಲಾಯಿತಾದರೂ, ಭಾರತದ ಸ್ಪರ್ಧಿಗಳು 1924ರ ಕ್ರೀಡಾಕೂಟದಿಂದ ಪಾಲ್ಗೊಂಡರು. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಗೆದ್ದರು. ಸ್ವಾತಂತ್ರ್ಯಾನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಪದಕ ಅದಾಗಿತ್ತು. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕಾಶಾಬಾ ಜಾಧವ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ADVERTISEMENT

ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸಾನಿಯಾ ಮಿರ್ಜಾ 2008ರ ಬೀಜಿಂಗ್‌ ಕೂಟದ ಮಹಿಳಾ ಡಬಲ್ಸ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತಿದ್ದರು. 2016ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಜೊತೆ ಸೆಮಿಫೈನಲ್‌ ಪ್ರವೇಶಿಸಿದ್ದರು. ಆಗಿನ ಒಲಿಂಪಿಕ್ಸ್‌ಗೂ ಮೊದಲು ಆಸ್ಟ್ರೇಲಿಯಾ ಓಪನ್‌ನ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಬಳಿಕ ಯಾವ ಗ್ರ್ಯಾಂಡ್‌ ಪ್ರಿ ಟೂರ್ನಿಗಳಲ್ಲಿ ಫೈನಲ್ ತಲುಪಿಲ್ಲ.

2018ರಿಂದ ಎರಡು ವರ್ಷ ಸ್ಪರ್ಧಾತ್ಮಕ ಟೂರ್ನಿಗಳಿಂದ ವಿಶ್ರಾಂತಿ ಪಡೆದಿದ್ದ ಸಾನಿಯಾ ಮೊಣಕಾಲಿನ ಗಾಯದ ಸಮಸ್ಯೆ ಎದುರಿಸಿದ್ದರು. ಮಗನ ಮೊದಲ ವರ್ಷದ ಜನ್ಮದಿನದ ಬಳಿಕ ಸ್ಪರ್ಧಾ ಕಣಕ್ಕೆ ಮರಳಿದ್ದಾರೆ. ‘ಅಮ್ಮ’ನಾದ ಬಳಿಕ ಜಾಗತಿಕ ಮಟ್ಟದ ದೊಡ್ಡ ಸವಾಲು ಎದುರಿಸಲು ಈಗ ಕಾಯುತ್ತಿದ್ದಾರೆ.

ಐದು ವರ್ಷದವರಿದ್ದಾಗಲೆ ಟೆನಿಸ್‌ ಬಗ್ಗೆ ಪ್ರೀತಿ ಬೆಳೆಸಿಕೊಂಡ ಗುಜರಾತ್‌ನ ಅಂಕಿತಾ ರೈನಾ 2018ರ ಏಷ್ಯನ್‌ ಕ್ರೀಡಾಕೂಟದ ಸಿಂಗಲ್ಸ್‌ನಲ್ಲಿ ಕಂಚು, ಸೌತ್‌ ಏಷ್ಯನ್‌ ಕ್ರೀಡಾಕೂಟದ ಸಿಂಗಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಹೀಗಾಗಿ ಅನುಭವಿ ಮತ್ತು ಹೊಸ ಆಟಗಾರ್ತಿಯ ಸಾಮರ್ಥ್ಯ ಹೇಗಿರಲಿದೆ ಎನ್ನುವುದು ಟೆನಿಸ್‌ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.