ಹೈಲಿ ಬ್ಯಾಪ್ಟಿಸ್ಟ್ ಮತ್ತು ವೀನಸ್ ವಿಲಿಯಮ್ಸ್
ವಾಷಿಂಗ್ಟನ್: ಟೆನಿಸ್‌ನಿಂದ 16 ತಿಂಗಳು ದೂರವಿದ್ದ ಅಮೆರಿಕದ ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು ಮತ್ತೆ ಸ್ಪರ್ಧಾ ಕಣಕ್ಕೆ ಮರಳಿದ್ದಾರೆ.
45 ವರ್ಷ ವೀನಸ್ ಅವರು ಡಿಸಿ ಓಪನ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ. ಅವರು ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಅಮೆರಿಕದವರೇ ಆದ 23 ವರ್ಷ ಹೈಲಿ ಬ್ಯಾಪ್ಟಿಸ್ಟ್ ಅವರೊಂದಿಗೆ ಜತೆಗೂಡಿ ಸೋಮವಾರ ಡಬಲ್ಸ್‌ನಲ್ಲಿ ಆಟವಾಡಿದರು. 6–3, 6–1ರ ನೇರ ಸೆಟ್‌ನಲ್ಲಿ ಈ ಜೋಡಿಯು ಯುಜೀನ್ ಬುಚರ್ಡ್ ಮತ್ತು ಕ್ಲೆರ್ವ್ ನೊನ್ಯೂ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಇದಕ್ಕೂ ಮೊದಲು 2024ರ ಮಾರ್ಚ್‌ನಲ್ಲಿ ಡಬ್ಲೂಟಿಎನಲ್ಲಿ ವೀನಸ್ ಆಟವಾಡಿದ್ದರು.
ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿಯಾಗಿರುವ ವೀನಸ್, ವಿಂಬಲ್ಡನ್‌ನಲ್ಲಿ ಐದು ಬಾರಿ ಸೇರಿದಂತೆ ಒಟ್ಟು ಏಳು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2024ರ ಮಿಯಾಮಿ ಓಪನ್ ಟೂರ್ನಿಯಲ್ಲಿ ಅವರು ಕೊನೆಯ ಬಾರಿ ಸ್ಪರ್ಧಿಸಿದ್ದರು. ಅಲ್ಲಿ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದರು.
‘ಟೆನಿಸ್ ಅಂಗಳಕ್ಕೆ ಮರಳಿದ ನಂತರ ಆಟವಾಡಿದ ಮೊದಲ ಪಂದ್ಯ ಸಂತಸ ನೀಡಿತು. ಗೆಲುವು ಸುಲಭದ್ದಾಗಿರಲಿಲ್ಲ. ಆದರೆ ನಾವು ಒಂದು ತಂಡವಾಗಿ ಆಡಿದ್ದರಿಂದ ಗೆಲುವು ನಮ್ಮದಾಯಿತು’ ಎಂದು ವೀನಸ್ ಹೇಳಿದ್ದಾರೆ.
‘ಬ್ಯಾಪ್ಟಿಸ್ಟ್ ಅದ್ಭುತವಾಗಿ ಆಟವಾಡುತ್ತಾರೆ. ಇವರು ಮೊದಲೇ ಪರಿಚಯವಾಗಿದ್ದರೆ 14 ಬಾರಿ ಗ್ಲಾನ್‌ಸ್ಲಮ್ ಡಬಲ್ಸ್ ಪ್ರಶಸ್ತಿಯನ್ನು ಪಡೆದ ನನ್ನ ಸೋದರಿ ಸೆರೆನಾ ಜತೆಯಾಗುತ್ತಿರಲಿಲ್ಲ’ ಎಂದು ವೀನಸ್ ನಗೆಚಟಾಕಿ ಹಾರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.