ADVERTISEMENT

World Badminton Tour Finals: ನಾಕೌಟ್‌ಗೆ ಸನಿಹದಲ್ಲಿ ಸಾತ್ವಿಕ್‌–ಚಿರಾಗ್‌

ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಟೂರ್ ಫೈನಲ್ಸ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 23:43 IST
Last Updated 18 ಡಿಸೆಂಬರ್ 2025, 23:43 IST
<div class="paragraphs"><p>ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ&nbsp;&nbsp;</p></div>

ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ  

   

ಹಾಂಗ್ಜು: ಭಾರತದ ಅಗ್ರಮಾನ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಟೂರ್ ಫೈನಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ನಾಕೌಟ್ ಹಂತಕ್ಕೆ ಹತ್ತಿರವಾದರು.

ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಜೋಡಿಯು ಗುರುವಾರ ನಡೆದ ಬಿ ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ  21-11, 16-21, 21-11ರಿಂದ ಇಂಡೊನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮೊಹಮ್ಮದ್ ಶೋಹಿಬುಲ್ ಫಿಕ್ರಿ ಅವರನ್ನು ಸೋಲಿಸಿದರು. ಭಾರತದ ಆಟಗಾರರು ಬುಧವಾರ 12–21, 22–20, 21–14ರಿಂದ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಜೋಡಿಯನ್ನು ಮಣಿಸಿ ಅಭಿಯಾನ ಆರಂಭಿಸಿದ್ದರು.

ADVERTISEMENT

ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತದ ಜೋಡಿಯು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದ ಜೋಡಿಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ವಿಶ್ವದ ಮಾಜಿ ಅಗ್ರಮಾನ್ಯ ಜೋಡಿಯು ಶುಕ್ರವಾರ ತಮ್ಮ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆರನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ (ಮಲೇಷ್ಯಾ) ಅವರನ್ನು ಎದುರಿಸಲಿದ್ದಾರೆ.

ಅಮೋಘ ಲಯದಲ್ಲಿರುವ ಭಾರತದ ಜೋಡಿಯು ಪ್ರಸಕ್ತ ಋತುವಿನಲ್ಲಿ ಹಾಂಗ್‌ಕಾಂಗ್ ಓಪನ್ ಮತ್ತು ಚೀನಾ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಅಲ್ಲದೆ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿತ್ತು. 

ಮುಂಭಾಗದ ಅಂಕಣದಲ್ಲಿ ಅಸಾಧಾರಣ ಕೌಶಲಗಳಿಗೆ ಹೆಸರುವಾಸಿಯಾದ ಇಂಡೊನೇಷ್ಯಾದ ಜೋಡಿಯನ್ನು ಎದುರಿಸುವಾಗ ಚಿರಾಗ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ದೋಷರಹಿತ ಆಟ ಪ್ರದರ್ಶಿಸಿದ ಅವರು, ಸಾತ್ವಿಕ್‌ ಅವರಿಗೆ ಉತ್ತಮ ಸಾಥ್‌ ನೀಡಿದರು.

ಚಿರಾಗ್‌ ಅವರ ಚುರುಕಿನ ಆಟ ಮತ್ತು ಎದುರಾಳಿ ಆಟಗಾರರ ತಪ್ಪಿನ ಲಾಭ ಪಡೆದ ಭಾರತದ ಜೋಡಿಯು ಮೊದಲ ಗೇಮ್‌ನಲ್ಲಿ 6–0 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆಯಿತು. ಗೇಮ್‌ ಮೇಲೆ ಬಿಗಿ ಹಿಡಿತ ಸಾಧಿಸಿದ ಅವರು ಅಂತರವನ್ನು 11–2ಕ್ಕೆ ಹಿಗ್ಗಿಸಿದರು. ಈ ಹಂತದಲ್ಲಿ ಇಂಡೋನೇಷ್ಯಾ ಜೋಡಿ ಕೊಂಚ ಪ್ರತಿರೋಧ ತೋರಿ ಹಿನ್ನಡೆಯನ್ನು 6–12ಕ್ಕೆ ತಗ್ಗಿಸಿಕೊಂಡಿತು. ಚಿರಾಗ್ ಮತ್ತೊಮ್ಮೆ ಕ್ರಾಸ್ ಕೋರ್ಟ್ ಶಾಟ್ ಮೂಲಕ ಸರ್ವ್ ಮರಳಿ ಪಡೆದರು. ಮೊದಲ ಗೇಮ್‌ನಲ್ಲಿ 10 ಅಂಕಗಳಿಂದ ಭಾರತದ ಜೋಡಿ ಪಾರಮ್ಯ ಮೆರೆಯಿತು.

ಎರಡನೇ ಗೇಮ್‌ನಲ್ಲಿ ಎರಡೂ ಜೋಡಿಗಳು ಆರಂಭದಲ್ಲಿ 3-3 ಅಂತರದಲ್ಲಿ ಸಮಬಲದ ಹೋರಾಟ ನಡೆಸಿದರು. ನಂತರ ಎದುರಾಳಿ ಆಟಗಾರರು ನಿಖರ ಆಟ ಪ್ರದರ್ಶಿಸಿ ಅಂತರವನ್ನು 8–3ಕ್ಕೆ ಹೆಚ್ಚಿಸಿದರು. ಇಂಡೊನೇಷ್ಯಾ ಜೋಡಿಯು ಕೊನೆಯವರೆಗೂ ಮುನ್ನಡೆಯನ್ನು ಬಿಟ್ಟುಕೊಡದೆ ಗೇಮ್‌ ಸಮಬಲ ಮಾಡಿಕೊಂಡಿತು. ನಿರ್ಣಾಯಕ ಗೇಮ್‌ನಲ್ಲಿ ಭಾರತದ ಜೋಡಿ ನಿಖರ ಹೊಡೆತಗಳ ಮೂಲಕ 11-4 ಮುನ್ನಡೆ ಗಳಿಸಿತು. ಎದುರಾಳಿ ಜೋಡಿಯು ಸತತ ನಾಲ್ಕು ಅಂಕಗಳನ್ನು ಸಂಪಾದಿಸಿ, ಹಿನ್ನಡೆಯನ್ನು 12–9ಕ್ಕೆ ಇಳಿಸಿಕೊಂಡಿತು. ಆದರೆ, ನಂತರ  ಆಕ್ರಮಣಕಾರಿ ಆಟ ಮುಂದುವರಿಸಿದ ಸಾತ್ವಿಕ್‌–ಚಿರಾಗ್‌ ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.