ADVERTISEMENT

ವಿಶ್ವ ಬ್ಲಿಟ್ಜ್‌ ಚೆಸ್‌: ಹಂಪಿಗೆ ಐದನೇ ಸ್ಥಾನ

ಪಿಟಿಐ
Published 31 ಡಿಸೆಂಬರ್ 2021, 13:40 IST
Last Updated 31 ಡಿಸೆಂಬರ್ 2021, 13:40 IST
ಕೊನೇರು ಹಂಪಿ –ಟ್ವಿಟರ್ ಚಿತ್ರ
ಕೊನೇರು ಹಂಪಿ –ಟ್ವಿಟರ್ ಚಿತ್ರ   

ವಾರ್ಸಾ: ಭಾರತದ ಕೊನೇರು ಹಂಪಿ ಅವರು ವಿಶ್ವ ಬ್ಲಿಟ್ಜ್ ಚೆಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ. ಒಂಬತ್ತು ಸುತ್ತುಗಳ ಬಳಿಕ ಎರಡನೇ ಸ್ಥಾನದಲ್ಲಿದ್ದ ಆರ್‌. ವೈಶಾಲಿ 14ನೇ ಸ್ಥಾನಕ್ಕೆ ಜಾರಿದರು.

ಹಂಪಿ ಅವರು 17 ಸುತ್ತುಗಳಿಂದ 11.5 ಪಾಯಿಂಟ್‌ಗಳನ್ನು ಗಳಿಸಿ ಇತರ ಇಬ್ಬರೊಂದಿಗೆ ಸಮಾನ ಅಂಕ ಪಡೆದರು. ಅಂತಿಮ ಸುತ್ತಿನಲ್ಲಿ ಪೋಲಿನಾ ಶುವಾಲೋವಾ (ರಷ್ಯಾ) ವಿರುದ್ಧ ಸೋಲನುಭವಿಸಿದ್ದು ಹಂಪಿ ಅವರ ಉತ್ತಮ ಸ್ಥಾನ ಗಳಿಕೆಗೆ ಅಡ್ಡಿಯಾಯಿತು. ವೈಶಾಲಿ ಕೂಡ ಕೊನೆಯ ಸುತ್ತಿನಲ್ಲಿ ಓಲ್ಗಾ ಗಿರಿಯಾ (ರಷ್ಯಾ) ಎದುರುನಿರಾಸೆ ಅನುಭವಿಸಿದರು.

ಮುಕ್ತ ವಿಭಾಗದಲ್ಲಿ ವಿದಿತ್ ಸಂತೋಷ್ ಗುಜರಾತಿ ಅತ್ಯುತ್ತಮ ಸಾಮರ್ಥ್ಯ ತೋರಿ 13 ಪಾಯಿಂಟ್‌ಗಳೊಂದಿಗೆ 18ನೇ ಸ್ಥಾನ ಗಳಿಸಿದರೆ, 13 ಪಾಯಿಂಟ್ಸ್ ಗಳಿಸಿದ ನಿಹಾಲ್ ಸರಿನ್ 19ನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು.

ADVERTISEMENT

ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನಾರ್ವೆಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗೆ ಡ್ರಾ ಮಾಡಿಕೊಂಡಿದ್ದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಎರಿಗೈಸಿ 12.5 ಪಾಯಿಂಟ್ಸ್‌ನೊಂದಿಗೆ 24ನೇ ಸ್ಥಾನ ಗಳಿಸಿದರು.

ಫ್ರಾನ್ಸ್‌ನ ಮ್ಯಾಕ್ಸಿಮ್‌ ವಚಿರ್ ಲ್ಯಾಗ್ರೇವ್‌ ಅವರು ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಟೈಬ್ರೇಕ್‌ನಲ್ಲಿ ಅವರು ಪೋಲೆಂಡ್‌ನ ಜಾನ್ ಕ್ರಿಸ್ಟಾಫ್‌ ದುಡಾ ಅವರನ್ನು ಹಿಂದಿಕ್ಕಿದರು. ಮಹಿಳಾ ವಿಭಾಗದ ಚಾಂಪಿಯನ್‌ ಪಟ್ಟವು ಕಜಕಸ್ತಾನದ 17 ವರ್ಷದ ಬಿಬಿಸಾರ ಅಸ್ಸಾಬಯೆವಾ ಅವರ ಪಾಲಾಯಿತು.

ಕಳೆದ ಬಾರಿ ರ‍್ಯಾಪಿಡ್‌ ಹಾಗೂ ಬ್ಲಿಟ್ಜ್‌ ಎರಡರಲ್ಲೂ ಚಾಂಪಿಯನ್ ಆಗಿದ್ದ ಕಾರ್ಲ್‌ಸನ್‌ ಈ ಬಾರಿ ವಿಫಲರಾದರು.

ಲೋಕಾಓಪನ್‌; ಇನಿಯನ್‌ಗೆ ಮೂರನೇ ಸ್ಥಾನ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್ ಅವರು ಸ್ಪೇನ್‌ನಲ್ಲಿ ನಡೆದ ಲೋಕಾ ಓಪನ್‌ ಚೆಸ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದರು.

19 ವರ್ಷದ ಇನಿಯನ್, ಒಂಬತ್ತು ಸುತ್ತುಗಳಿಂದ ಏಳು ಪಾಯಿಂಟ್ಸ್ ಕಲೆಹಾಕಿದರು. ಕಾರ್ತಿಕ್‌ ವೆಂಕಟರಾಮನ್‌ ಏಳು ಪಾಯಿಂಟ್ಸ್ ಗಳಿಸಿದರೂ, ಟೈಬ್ರೇಕ್‌ನಲ್ಲಿ ಹಿನ್ನಡೆ ಅನುಭವಿಸಿದ ಕಾರಣ ನಾಲ್ಕನೇ ಸ್ಥಾನ ಪಡೆದರು. ಬ್ರೆಜಿಲ್‌ನ ಅಲೆಕ್ಸಾಂಡರ್‌ ಫಿಯರ್‌ (7.5 ಪಾಯಿಂಟ್ಸ್) ಪ್ರಶಸ್ತಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.