ಕೋಚ್ ಸಿಬ್ಬಂದಿಯೊಡನೆ ನಿಕಹತ್ ಜರೀನ್ ಸಂಭ್ರಮ
ಲಿವರ್‌ಪೂಲ್ (ಬ್ರಿಟನ್): ಶ್ರೇಯಾಂಕ ರಹಿತ ನಿಕಹತ್ ಜರೀನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಶುಭಾರಂಭ ಮಾಡಿದರು. ಆದರೆ, ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಆಘಾತ ಅನುಭವಿಸಿದರು.
ಎರಡು ಬಾರಿ ವಿಶ್ವ ಚಾಂಪಿಯನ್ ನಿಕಹತ್ ಅವರು ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಅಮೆರಿಕದ ಜೆನಿಫರ್ ಲೊಜಾನೊ ಎದುರು 5–0 ಬೌಟ‌್ಗಳಿಂದ ಗೆಲುವು ಸಾಧಿಸಿ, 16ರ ಘಟ್ಟ ಪ್ರವೇಶಿಸಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು, ಈ ಟೂರ್ನಿಯ ಮೂಲಕ ಅಂತರರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗೆ ಮರಳಿದ್ದಾರೆ.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ನರೇಂದ್ರ ಬರ್ವಾಲ್ ಅವರು 90+ ಕೆ.ಜಿ. ವಿಭಾಗದಲ್ಲಿ 4–1ರಿಂದ ಐರ್ಲೆಂಡ್‌ನ ಮಾರ್ಟಿನ್ ಕ್ರಿಸ್ಟೊಫರ್ ಮೆಕ್‌ಡೊನಾಗ್ ಅವರನ್ನು ಹಿಮ್ಮೆಟ್ಟಿಸಿ 16ರ ಘಟ್ಟಕ್ಕೆ ಮುನ್ನಡೆದರು.
ಅಗ್ರ ಶ್ರೇಯಾಂಕಿತೆ ಲವ್ಲಿನಾ, ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ 0–5ರಿಂದ ಟರ್ಕಿಯ ಬುಸ್ರಾ ಇಸಿಲ್ದಾರ್ ಎದುರು ಪರಾಭವಗೊಂಡರು.
ಎರಡು ಬಾರಿಯ ವಿಶ್ವಕಪ್ ವಿನ್ನರ್ ಹಿತೇಶ್ ಗುಲಿಯಾ ಅವರೂ ಸೋಲಿನ ಕಹಿ ಅನುಭವಿಸಬೇಕಾಯಿತು. ಪುರುಷರ 70 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿರುವ ಅವರು 1–4ರಿಂದ ಬೊಸ್ ಫಿನ್ ರಾಬರ್ಟ್ (ನೆದರ್ಲೆಂಡ್ಸ್) ವಿರುದ್ಧ 1–4ರಿಂದ ಸೋಲುಂಡರು. ಅವರು ಪ್ರಥಮ ಸುತ್ತಿನಲ್ಲಿ ಬೈ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.