ADVERTISEMENT

PV Web Exclusive| ಭಾರತ ಮಹಿಳಾ ಟೆನಿಸ್‌ಗೆ ಭರವಸೆಯ ‘ಅಂಕಿತ’

ವಿಕ್ರಂ ಕಾಂತಿಕೆರೆ
Published 21 ಫೆಬ್ರುವರಿ 2021, 6:59 IST
Last Updated 21 ಫೆಬ್ರುವರಿ 2021, 6:59 IST
ಅಂಕಿತಾ ರೈನಾ –ಎಎಫ್‌ಪಿ ಚಿತ್ರ
ಅಂಕಿತಾ ರೈನಾ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯ ಮುಗಿದಿತ್ತು. ಎರಡು ವರ್ಷಗಳ ಹಿಂದೆ ತಮ್ಮ ಆಟವನ್ನು ‘ನೀರಸ’ ಎಂದು ಹೇಳಿ ಗೇಲಿ ಮಾಡಿದ್ದ ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್‌ ವಿರುದ್ಧ ಗೆದ್ದ ರಷ್ಯಾದ ‘ಸಂಯಮಿ’ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಬಗ್ಗೆ ಮತ್ತು ಆ ಪಂದ್ಯದ ಕುರಿತು ಕ್ರೀಡಾ ಚಾನಲ್‌ನಲ್ಲಿ ಚರ್ಚೆ ನಡೆಯುತ್ತಿತ್ತು. ಆನ್‌ಲೈನ್ ಮೂಲಕ ಭಾರತದ ಸಾನಿಯಾ ಮಿರ್ಜಾ ಅವರೂ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಕಾಕತಾಳೀಯ ಎಂಬಂತೆ, ಇದೇ ಸಂದರ್ಭದಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಫಿಲಿಪ್ ಐಲ್ಯಾಂಡ್ ಟ್ರೋಫಿ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್ ಫೈನಲ್‌ನಲ್ಲಿ ಭಾರತದ ಅಂಕಿತಾ ರೈನಾ ಮತ್ತು ರಷ್ಯಾದ ಕಮಿಲಾ ರಖಿಮೋವ ಗೆದ್ದು ಸಂಭ್ರಮಿಸಿದ್ದರು. ಎಲ್ಲಿಯ ಅಂಕಿತಾ ರೈನಾ, ಎಲ್ಲಿಯ ಸಾನಿಯಾ ಮಿರ್ಜಾ ಎಂಬ ಸಂದೇಹ ಮೂಡುವುದು ಸಹಜ. ಆದರೆ ಫಿಲಿಪ್ ಐಲ್ಯಾಂಡ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅಂಕಿತಾ, ಸಾನಿಯಾ ಮಿರ್ಜಾ ಅವರನ್ನೂ ಭಾರತದ ಟೆನಿಸ್ ಪ್ರಿಯರು ನೆನಪಿಸಿಕೊಳ್ಳುವಂತೆ ಮಾಡಿದರು.

ಯಾಕೆಂದರೆ, ಈ ಟೂರ್ನಿಯಿಂದ ಅಂಕಿತಾ ಗಳಿಸಿದ 280 ರ‍್ಯಾಂಕಿಂಗ್ ಪಾಯಿಂಟ್‌ಗಳು ಅವರ ವೃತ್ತಿಜೀವನದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಗೆ ನೆರವಾಗಿದ್ದವು. ಈ ಪಾಯಿಂಟ್‌ಗಳೊಂದಿಗೆ ಅವರು ಡಬ್ಲ್ಯುಟಿಎ ರ‍್ಯಾಂಕಿಂಗ್ ಪಟ್ಟಿಯ ಅಗ್ರ ನೂರರ ಒಳಗೆ ಸ್ಥಾನ ಗಳಿಸಲು ಅರ್ಹತೆ ಹೊಂದಿದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಅಗ್ರ 100ರ ಒಳಗೆ ಸ್ಥಾನ ಗಳಿಸಿದ ಭಾರತದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ ಈ ವರೆಗೆ ಸಾನಿಯಾ ಮಿರ್ಜಾ ಅವರದಾಗಿತ್ತು. ಈಗ ಅಂಕಿತಾ ರೈನಾ ಆ ಪಟ್ಟಿಯಲ್ಲಿ ಸೇರಲು ವೇದಿಕೆ ಸಜ್ಜಾಗಿದೆ. ಸದ್ಯ 115ನೇ ಸ್ಥಾನದಲ್ಲಿರುವ ಅವರುಫೆಬ್ರುವರಿ 22ರಂದು ಹೊರಬೀಳಲಿರುವ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 94ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

28 ವರ್ಷದ (ಜನನ–1993, ಜನವರಿ 11) ಅಂಕಿತಾ ಟೆನಿಸ್ ಆಡಲು ಆರಂಭಿಸಿದ್ದು ಐದನೇ ವಯಸ್ಸಿನಲ್ಲಿ. 2009ರಲ್ಲಿ ಮೊದಲ ಬಾರಿ ವೃತ್ತಿಪರ ಟೆನಿಸ್‌ ಕೂಟದಲ್ಲಿ ಕಾಣಿಸಿಕೊಂಡ ಅವರು ನಂತರ ಭಾರತ ಟೆನಿಸ್‌ನ ಧ್ರುವತಾರೆಯಾಗಿ ಮಿಂಚುತ್ತಲೇ ಇದ್ದಾರೆ. ಸಿಂಗಲ್ಸ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ್ದರೂ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಡಬಲ್ಸ್‌ ವಿಭಾಗ. ಈಗ ಗರಿಷ್ಠ ರ‍್ಯಾಂಕಿಂಗ್ ಬಂದಿರುವುದು ಕೂಡ ಡಬಲ್ಸ್‌ನಲ್ಲೇ. ಸಿಂಗಲ್ಸ್‌ನಲ್ಲೂ ಅಗ್ರ 100ರ ಒಳಗೆ ಕಾಣಿಸಿಕೊಳ್ಳುವುದು ಮುಂದಿನ ಗುರಿ ಎಂದು ಮೆಲ್ಬರ್ನ್‌ನಲ್ಲಿ ಹೇಳಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಸಿಂಗಲ್ಸ್ ವಿಭಾಗದ ಅಗ್ರ 200ರಲ್ಲಿ ಸ್ಥಾನ ಗಳಿಸಿ ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರ್ತಿ ಎನಿಸಿದ್ದರು.

ಅಂಕಿತಾ ಪಾಲಕರು ಜಮ್ಮು ಕಾಶ್ಮೀರದವರು. ಪುಲ್ವಾಮ ಜಿಲ್ಲೆಯ ತ್ರಾಲ್‌ನಲ್ಲಿದ್ದ ಅವರು ಸಾಮಾಜಿಕ ಸ್ಥಿತ್ಯಂತರದ ಕಾಲದಲ್ಲಿ ಅಲ್ಲಿಂದ ಪಲಾಯನ ಮಾಡಿ ಗುಜರಾತ್‌ನಲ್ಲಿ ನೆಲೆಸಿದ್ದರು. ಅಂಕಿತಾ ಜನಿಸಿದ್ದು ಅಹಮದಾಬಾದ್‌ನಲ್ಲಿ. ಅವರೇ ಹೇಳಿಕೊಂಡಂತೆ ಸಣ್ಣವರಿದ್ದಾಗ ಮನೆಯ ಹಿಂದೆಯೇ ಟೆನಿಸ್ ಅಕಾಡೆಮಿ ಇತ್ತು. ಹೀಗಾಗಿ ಸುತ್ತಮುತ್ತ ಟೆನಿಸ್ ಕ್ರೀಡೆಯ ಬಗ್ಗೆ ಎಲ್ಲರಿಗೂ ಒಲವು ಇತ್ತು. ಇದು, ಅಂಕಿತಾ ಅವರನ್ನೂ ಈ ಕ್ರೀಡೆಯತ್ತ ಆಕರ್ಷಿಸಿತು.

ಬಲಗೈ ಆಟಗಾರ್ತಿಯಾಗಿರುವ ಅಂಕಿತಾ ಎರಡೂ ಕೈಗಳನ್ನು ಬಳಸಿ ಹೊಡೆಯುವ ಬ್ಯಾಕ್‌ಹ್ಯಾಂಡ್ ಶಾಟ್‌ಗಳಿಗೆ ಖ್ಯಾತಿ ಗಳಿಸಿದ್ದಾರೆ. 2011ರ ಐಟಿಎಫ್‌ ಸರ್ಕೀಟ್‌ನ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿಯುವ ಮೂಲಕ ವೃತ್ತಿಪರ ಟೆನಿಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡ ಅವರು 2014ರಿಂದ ಫೆಡರೇಷನ್ ಕಪ್‌ ಟೂರ್ನಿಯ ಪ್ರತಿ ಆವೃತ್ತಿಯಲ್ಲೂ ಸಕ್ರಿಯರಾಗಿದ್ದರು. ಆದರೆ ಅಂತರರಾಷ್ಟ್ರೀಯವಾಗಿ ಹೆಚ್ಚು ಹೆಸರು ಮಾಡಿದ್ದು 2016ರ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ. ಆ ಕೂಟದಲ್ಲಿ ಚಿನ್ನ ಗೆದ್ದಿದ್ದ ಅವರು 2018ರ ಏಷ್ಯನ್ ಗೇಮ್ಸ್‌ನಲ್ಲಿ ಚೀನಾದ ಜಾಂಗ್ ಶುಹಾಯ್ ಎದುರು ಗೆದ್ದು ಕಂಚಿನ ಪದಕ ಗಳಿಸಿದ್ದರು. ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಕ್ವಾರ್ಟರ್ ಫೈನಲ್‌ ವರೆಗೆ ತಲುಪಿದ್ದರು. ಮುಂಬೈ ಓ‍ಪನ್ ಸೇರಿದಂತೆ ದೇಶದ ವಿವಿಧ ಟೂರ್ನಿಗಳಲ್ಲಿ ಅವರ ಹೆಸರು ಸದಾ ಮುಂಪಕ್ತಿಯಲ್ಲಿತ್ತು.

ಈ ವರ್ಷದ ಆರಂಭದಲ್ಲೇ ಅಂಕಿತಾ ಪಾಲಿಗೆ ಶುಕ್ರದೆಸೆ. ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುವುದರ ಮೂಲಕ ಗ್ರ್ಯಾನ್‌ಸ್ಲಾಂಗೆ ಪದಾರ್ಪಣೆ ಮಾಡಿದ ಅವರು ಡಬ್ಲ್ಹುಟಿಎ ಟೂರ್ನಿಯೊಂದರ ಸಿಂಗಲ್ಸ್‌ನಲ್ಲಿ ಮೊತ್ತಮೊದಲ ಬಾರಿ ಮುಖ್ಯ ಸುತ್ತಿನ ಪಂದ್ಯವೊಂದನ್ನು ಗೆದ್ದ ಸಾಧನೆಯನ್ನೂ ಮಾಡಿದರು. ಡಬಲ್ಸ್‌ನಲ್ಲಿ ಮಿಹೇಲ ಬುಸರ್ನೆಸ್ಕು ಜೊತೆಗೂಡಿ ಆಡಿದ ಅವರು ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಮುಖ್ಯ ಸುತ್ತು ಪ್ರವೇಶಿಸಿದ ಭಾರತದ ನಾಲ್ಕನೇ ಟೆನಿಸ್ ಪಟು ಎನಿಸಿದರು. ನಿರುಪಮಾ ಮಂಕಡ್, ನಿರುಪಮಾ ಸಂಜೀವ್ ಮತ್ತು ಸಾನಿಯಾ ಮಿರ್ಜಾ ಈ ಹಿಂದೆ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾ ಓಪನ್‌ನ ಸಿಂಗಲ್ಸ್‌ನ ಮೂರನೇ ಅರ್ಹತಾ ಪಂದ್ಯದಲ್ಲಿ ಓಲ್ಗಾ ಡ್ಯಾನಿಲೊವಿಚ್‌ಗೆ ಮಣಿದ ಅಂಕಿತಾ ಡಬಲ್ಸ್‌ನ ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಸೋತಿದ್ದರು.

ಸಿಂಗಲ್ಸ್‌ನಲ್ಲಿ ಈ ವರೆಗೆ 275 ಪಂದ್ಯಗಳನ್ನು ಆಡಿರುವ ಅಂಕಿತಾ 227 ಪಂದ್ಯಗಳನ್ನು ಗೆದ್ದುಕೊಂಡಿದ್ದು ಡಬಲ್ಸ್‌ನಲ್ಲಿ 207 ಪಂದ್ಯಗಳ ಪೈಕಿ 174ರಲ್ಲಿ ಗೆಲುವು ಸಾಧಿಸಿದ್ದಾರೆ. ಡಬಲ್ಸ್ ವಿಭಾಗದ ರ‍್ಯಾಂಕಿಂಗ್ ಪಟ್ಟಿಯಲ್ಲಿ 100ರ ಒಳಗೆ ಕಾಣಿಸಿಕೊಳ್ಳುವುದು ಈಗಾಗಲೇ ದೃಢಪಟ್ಟಿರುವ ವಿಷಯ. ಇದೇ ವೇಳೆ ಸಿಂಗಲ್ಸ್‌ನಲ್ಲೂ ಅಗ್ರ 100ರ ಒಳಗೆ ಸ್ಥಾನ ಗಳಿಸುವ ಆಶಯವನ್ನು ಅಂಕಿತಾ ವ್ಯಕ್ತಪಡಿಸಿದ್ದಾರೆ. ಆ ಹಾದಿಯಲ್ಲಿ ಕಠಿಣ ಪ್ರಯತ್ನಕ್ಕೆ ಈಗಾಗಲೇ ಟೊಂಕ ಕಟ್ಟಿದ್ದಾರೆ. ಮಹಿಳಾ ಟೆನಿಸ್‌ನಲ್ಲಿ ಭಾರತಕ್ಕೆ ದೊಡ್ಡ ಹೆಸರು ತಂದುಕೊಟ್ಟವರು ಸಾನಿಯಾ ಮಿರ್ಜಾ. ಈಗ ಅಂಕಿತಾ ಕೂಡ ಸಾನಿಯಾ ಅವರಂತೆಯೇ ಮಿಂಚುತ್ತಿದ್ದಾರೆ. ಅವರು ಭಾರತ ಟೆನಿಸ್‌ನಲ್ಲಿ ಹೊಸ ಯುಗಕ್ಕೆ ‘ಅಂಕಿತ’ ಹಾಕುವರೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.